ಜಿಲ್ಲೆ

ಪಂಜೆ ನೆನಪಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕನ್ನಡದ ಹೆಸರಾಂತ ಸಾಹಿತಿ, ಮಡಿಕೇರಿಯ ಜೂನಿಯರ್ ಕಾಲೇಜಿನಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಪಂಜೆ ಮಂಗೇಶರಾಯರ ನೆನಪನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದ ಶಾಲೆಯ ಕೊಠಡಿಯೊಂದನ್ನು ಸ್ಮಾರಕವಾಗಿಸಿ, ಶಾಲೆಯಲ್ಲಿ ಪಂಜೆಯವರ ಪುತ್ತಳಿ ಸ್ಥಾಪಿಸಬೇಕೆಂದು ಪತ್ರಕರ್ತ ಜಿ. ಚಿದ್ವಿಲಾಸ್ ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೊಡಗು ಘಟಕದಿಂದ ಗುರುವಾರ ಆಯೋಜಿತ ಪಂಜೆ ಮಂಗೇಶರಾಯರ 150 ನೇ ವರ್ಷಾಚರಣೆ ಸಂದರ್ಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಡಿಕೇರಿಯ ಅಂದಿನ ಸೆಂಟ್ರಲ್ ಹೈಸ್ಕೂಲಿನಲ್ಲಿ ಪಂಜೆ ಮಂಗೇಶರಾಯರು ಮುಖ್ಯೋಪಾಧ್ಯಾಯರಾಗಿದ್ದರು ಎಂಬುದೇ ಕೊಡಗಿಗೆ ಅತ್ಯಂತ ಹೆಮ್ಮೆಯ ವಿಚಾರ. ಹೀಗಿರುವಾಗ ಪಂಜೆ ಮಂಗೇಶರಾಯರ ಸಾಹಿತ್ಯ ಲೋಕದ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತಷ್ಟು ರೀತಿಯಲ್ಲಿ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಅವರು ಪಾಠ ಮಾಡುತ್ತಿದ್ದ ತರಗತಿಯನ್ನು ಪಂಜೆಯವರ ಹೆಸರಿನಲ್ಲಿ ಗುರುತಿಸಿ, ಉತ್ತಮ ಕೃತಿಗಳ ಗ್ರಂಥಾಲಯವನ್ನು ಸ್ಥಾಪಿಸಬೇಕು. ಆ ಮೂಲಕ ಸಾಹಿತ್ಯ ಪ್ರೇಮಿಗಳ ಮನದಲ್ಲಿ ಪಂಜೆಯವರ ನೆನಪನ್ನು ಚಿರಸ್ಥಾತಿಯಾಗಿಸಬೇಕು. ಜೂನಿಯರ್ ಕಾಲೇಜಿನ ಆವರಣದಲ್ಲಿ ಪಂಜೆ ಮಂಗೇಶರಾಯರ ಪುತ್ಥಳಿ ಸ್ಫಾಪಿಸುವ ಮೂಲಕ ಅವರನ್ನು ಸದಾ ಸ್ಮರಿಸುವಂತಾಗಬೇಕು ಎಂದರು.

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಹೆಚ್.ಟಿ. ಅನಿಲ್ ಮಾತನಾಡಿ, ಕವಿಶಿಷ್ಯ ಎಂಬ ಹೆಸರಿನಿಂದ ಅನೇಕ ಸಾಹಿತ್ಯ ಲೇಖನ, ಕವಿತೆಗಳನ್ನು ಬರೆಯುವ ಮೂಲಕ ಕವಿಋಷಿಯಾಗಿದ್ದ ಪಂಜೆ ಮಂಗೇಶರಾಯರು ನಿಜವಾದ ಅರ್ಥದÀಲ್ಲಿ ಕವಿಗುರುವಿನಂತೆ ಇದ್ದರು. ಕೊಡಗಿನ ಕುರಿತಾದ ಎಲ್ಲಿ ಭೂರಮೆಯಂಥ ಪದ್ಯದ ಮೂಲಕ ಇಡೀ ಜಗತ್ತೇ ಕೊಡಗನ್ನು ಹಾಡಿನ ಮೂಲಕ ಗುರುತಿಸುವಂತೆ ಮಾಡಿದ್ದರು. ಕೇರಳ ಪ್ರವಾಸೋದ್ಯಮ ಇಲಾಖೆಯು ದೇವರ ನಾಡು ಎಂದು ಬಿಂಬಿಸಿಕೊಳ್ಳುತ್ತಿದೆಯಾದರೂ 1923 ರಲ್ಲಿಯೇ ಪಂಜೆಯವರು ಕೊಡಗನ್ನು ಭೂರಮೆ ದೇವನ ಸನ್ನಿಧಿ ಬಯಸಿ ಭಿಮ್ಮನೆ ಬಂದ ನಾಡೆಂದು ವರ್ಣಿಸಿದ್ದರು. ಮಡಿಕೇರಿಗೆ ಮುಖ್ಯೋಪಾಧ್ಯಾಯರಾಗಿ ಕರ್ತವ್ಯಕ್ಕೆ ಬಂದ ಮೊದಲ ಭಾರತೀಯ ಮುಖ್ಯೋಪಾಧ್ಯಾಯರಾಗಿದ್ದ ಪಂಜೆಯವರಿಗೆ ನಿರೀಕ್ಷಿತ ರೀತಿಯಲ್ಲಿ ಸ್ವಾಗತ ದೊರಕಲಿಲ್ಲ. ಯುರೋಪಿಯನ್ ಮುಖ್ಯೋಪಾಧ್ಯಾಯರನ್ನೇ ಬಯಸಿದ್ದ ಶಿಕ್ಷಕ ವೃಂದ ಪಂಜೆಯವರನ್ನು ಹತ್ತಿರಕ್ಕೆ ಸೇರಿಸಿರಲಿಲ್ಲ. ಹೀಗಿದ್ದರೂ ಬೇಸರಿಸಿಕೊಳ್ಳದೇ, ಕಾಲಕ್ರಮೇಣ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಕೊಡಗಿನ ಜನತೆ ಇಂದಿಗೂ ತಮ್ಮ ನಾಡಗೀತೆಯಂತೆ ಸ್ವೀಕರಿಸಿರುವ ಹುತ್ತರಿ ಹಾಡನ್ನು ಪಂಜೆಯವರು ಬರೆದರು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಕೊಡಗು ಘಟಕದ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಮಡಿಕೇರಿಯ ಜ್ಯೂನಿಯರ್ ಕಾಲೇಜು ರಸ್ತೆಗೆ ಮತ್ತೊಮ್ಮೆ ಕಸಾಪ ವತಿಯಿಂದ ಮಂಜೆ ಮಂಗೇಶರಾಯರ ಹೆಸರಿನ ನಾಮಫಲಕವನ್ನು ಲೋಕಾರ್ಪಣೆ ಮಾಡಲಾಗಿದೆ. ಅಂತೆಯೇ ವಿವಿಧ ಶಾಲಾಕಾಲೇಜುಗಳಿಗೆ ಪಂಜೆ ಮಂಗೇಶರಾಯರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿಲಾಗಿದೆ. ಈ ಮೊದಲು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಕಟಿಸಲಾಗಿದ್ದ ಪಂಜೆ ಮಂಗೇಶರಾಯರ ಕೃತಿಗಳನ್ನು ಮರುಮುದ್ರಣ ಮಾಡಬೇಕಾಗಿದೆ ಎಂದರು.

ಕಸಾಪ ಜಿಲ್ಲಾ ಅಧ್ಯಕ್ಷ ಎಂ.ಪಿ. ಕೇಶವಕಾಮತ್, ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಸಹಕಾರ್ಯದರ್ಶಿ ಜಲಜಾಶೇಖರ್, ಎ.ವಿ. ಮಂಜುನಾಥ್, ಸಂಘಟನಾ ಕಾರ್ಯದರ್ಶಿಗಳಾದ ಆರ್. ಪಿ. ಚಂದ್ರಶೇಖರ್, ಕೆ.ಎನ್. ದೇವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ದೊಡ್ಡೇಗೌಡ, ಡಾ.ಕಾವೇರಿ ಪ್ರಕಾಶ್, ಮೆ.ನಾ. ವೆಂಕಟನಾಯಕ, ಈರಮಂಡ ಹರಿಣಿ, ಚೊಕ್ಕಾಡಿ ಪ್ರೇಮಾ ರಾಘವಯ್ಯ ಪಿ.ಎಫ್. ಸಬಾಸ್ಟಿನ್ ಇದ್ದರು.

ಪಂಜೆ ಮಂಗೇಶರಾಯರ ಪ್ರಸಿದ್ದ ಹಾಡುಗಳನ್ನು ಆಧರಿಸಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.