ಮಂಡ್ಯ: ಜಿಲ್ಲೆಯ ಗಾಯಕ, ಗಾಯಕಿಯರು ಗಾಯನ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಹಾರೈಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ "ಹಾಡಿರೇ ರಾಗಗಳ-ತೂಗಿರೇ ದೀಪಗಳ" ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಯುವ ಗಾಯಕರು, ಗಾಯಕಿಯರು ತಮ್ಮ ಪ್ರತಿಭೆಗಳನ್ನು ಸಿನಿಮಾ ರಂಗ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೆಸರು ಮಾಡಿ ಜಿಲ್ಲೆಗೆ ಮಾದರಿಯಾಗಬೇಕು ಎಂದರು.
ಜಿಲ್ಲೆಯಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಾಡಲು ಅವಕಾಶ ಸಿಗದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ಹಾಡಿರೇ ರಾಗಗಳ-ತೂಗಿರೇ ದೀಪಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಾವಿದರಿಗೆ ಪ್ರೋತ್ಸಾಹ ನೀಡಲು ಇಂತಹ ವೇದಿಕೆಗಳು ಹೆಚ್ಚಾಗಲಿ. ಸ್ಥಳೀಯ ಕಲಾವಿದರನ್ನು ಗುರುತಿಸುವುದರ ಜತೆಗೆ ಅವರಿಗೆ ಕೆಲಸ ನೀಡುವಂತಹ ಕಾರ್ಯಗಳು ನಡೆಯಬೇಕು. ಅಂತೆಯೇ ಕಲಾವಿದರು ಇಂತಹ ವೇದಿಕೆಯನ್ನು ಸದುಪಯೋಗ ಪಡೆದುಕೊಳ್ಳಬೇಕು. ಇನ್ನೂ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಚಿತ್ರಗೀತೆಗಳ ಜತೆಗೆ ಶರಣರ, ದಾಸರ ಗೀತೆಗಳನ್ನು ಹಾಗೂ ವಚನಕಾರರ ವಚನಗಳನ್ನು ಹಾಡಿರಿ. ಬೆಲ್ಲದಾರತಿ ಸ್ಮರಣ ಸಂಚಿಕೆಯ ಬಿಡುಗಡೆಯ ದಿನದಂದು ಗಾಯಕರಿಗೆ ಅವಕಾಶ ನೀಡುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಂತಸದ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿನಂದೀಶ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಬಿ.ಎಸ್.ಅನುಪಮಾ, ಕಾರಸವಾಡಿ ಮಹದೇವು, ನಗರಸಭೆ ಸದಸ್ಯ ಶ್ರೀಧರ್ ಇತರರಿದ್ದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಾಯಕ, ಗಾಯಕಿಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.