ಜಿಲ್ಲೆ

ಬಾಲ್ಯದಿಂದಲೇ ಕಲೆ, ಸಂಸ್ಕೃತಿ ಪರಿಚಯಿಸಿ: ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ನಾರಾಯಣ್ ಅಭಿಮತ

ಮಂಡ್ಯ: ಮಕ್ಕಳಿಗೆ ಬಾಲ್ಯದಿಂದಲೇ ನಮ್ಮ ಕಲೆ, ಸಂಸ್ಕೃತಿಗಳ ಪರಿಚಯ ಮಾಡಿಕೊಡಬೇಕು ಎಂದು ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ಹೇಳಿದರು.

ನಗರದ ವಿದ್ಯಾಗಣಪತಿ ದೇವಾಲಯದ ಹೊಯ್ಸಳ ಸಭಾಂಗಣದಲ್ಲಿ ಶ್ರೀ ರಂಜಿನಿ ಕಲಾವೇದಿಕೆಯಿಂದ ಆಯೋಜಿಸಿದ್ದ ಹೊಸ ವರ್ಷಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಹಂ ತನವನ್ನು ಬಿಟ್ಟು ಜನೋಪಕಾರಿಯಾಗಿ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಮನುಷ್ಯನಾಗಿ ಸಂಸ್ಕಾರವಂತನಾಗಿ ಬಾಳುವುದು ಸಾಧ್ಯ. ಹಾಗಾಗಿ ಬೆಳೆಯುವ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಪರಿಚಯಿಸುವುದು ಅಗತ್ಯ. ಇದು ಎಲ್ಲ ಪಾಲಕರ ಜವಾಬ್ದಾರಿಯಾಗಿದೆ. ಸಂಗೀತ , ಸಾಹಿತ್ಯ. ನೃತ್ಯ ಲಲಿತ ಕಲಾ ಪ್ರಕಾರಗಳು ಮನುಷ್ಯನ ಮನಸ್ಸನ್ನು ಅರಳಿಸಿ ಜ್ಞಾನಾರ್ಜನೆಯತ್ತ ಪ್ರಚೋದಿಸುತ್ತವೆ. ಆದ್ದರಿಂದ ಮೊದಲು ಮನುಷ್ಯನಾಗಬೇಕು ಎಂದರು.

ಕ್ರೀಡಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೋಮಶೇಖರ್, ಮನೋವೈದ್ಯ ಟಿ.ಎಸ್.ಸತ್ಯನಾರಾಯಣರಾವ್, ಹಿರಿಯ ವಕೀಲ ಬಸವಯ್ಯ, ಸುಜಾತಾಕೃಷ್ಣ, ನೀನಾ ಪಟೇಲ್, ಶಿವಲಿಂಗೇಗೌಡ, ವೇದಿಕೆ ಅಧ್ಯಕ್ಷ ಸಿ.ಪಿ.ವಿದ್ಯಾಶಂಕರ್ ಇತರರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೆ.ಎಸ್.ಶೈಲಾ, ಎ.ಎನ್.ಬಸವರಾಜು, ಕೊತ್ತತ್ತಿರಾಜು, ದ.ಕೋ.ಹಳ್ಳಿ ಚಂದ್ರಶೇಖರ್, ದೋ.ಚಿ.ಗೌಡ, ಸಬ್ಬನಹಳ್ಳಿ ಶಶಿಧರ್, ಲೋಕೇಶ್ ಕಲ್ಕುಣಿ, ರೋಷನ್ ಚೋಪ್ರಾ ಅವರನ್ನು ಸನ್ಮಾನಿಸಲಾಯಿತು.