ಚನ್ನರಾಯಪಟ್ಟಣದ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಜಿಪಂ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ಬಹುಮಾನ ವಿತರಿಸಿದರು. ಚ.ನಾ. ಅಶೋಕ್, ಆನಂದ್ ಕಾಳೆನಹಳ್ಳಿ, ಎ.ಎಲ್.ನಾಗೇಶ್ ಇತರರು ಇದ್ದರು. 
ಜಿಲ್ಲೆ

ಶಿಕ್ಷಣ ಕದಿಯಲಾಗದ ವಿದ್ಯೆ

ನಾಗೇಶ ಎಸ್

ಚನ್ನರಾಯಪಟ್ಟಣ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ವೇದಿಕೆಗಳು ಸಹಕಾರಿಯಾಗಿವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಶನಿವಾರ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ ಮಕ್ಕಳಿಂದ ದೊಡ್ಡ ಕಲಾವಿದರಿಗೂ ತಮ್ಮ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ. ಅದೇ ರೀತಿ ಮಕ್ಕಳ ಸಾಹಿತ್ಯ ಪರಿಷತ್ತು ದಶಮಾನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಹಲವಾರು ಪ್ರತಿಭೆಗಳನ್ನು ಗುರುತಿಸಿ ಮುನ್ನೆಲೆಗೆ ತಂದಿದ್ದಾರೆ. ಕದಿಯಲಾಗದ ವಿದ್ಯೆ ಇದ್ದರೆ ಅದು ಶಿಕ್ಷಣ ಮಾತ್ರ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದರು.

ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಸೂಕ್ತ ಮಾರ್ಗದರ್ಶನ ನೀಡಿ, ಸ್ನೇಹಿತರಂತೆ ಬೆಳೆಸಬೇಕು. ಯಾವುದೇ ಸ್ಪರ್ಧೆಯಲ್ಲಿ ಬಹುಮಾನ ಪಡೆಯುವುದಕ್ಕಿಂತ ಭಾಗವಹಿಸುವಿಕೆ ಮುಖ್ಯವಾಗುತ್ತದೆ ಎಂದರು.

ಪ್ರಸನ್ನ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಚ.ನಾ.ಅಶೋಕ್ ಮಾತನಾಡಿ, ಮಕ್ಕಳ ಸಾಹಿತ್ಯ ಪರಿಷತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ನ.15ರಂದು ರಾಷ್ಟ್ರಮಟ್ಟದ ಸಮ್ಮೇಳನವನ್ನು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠ ಹೆಚ್ಚು ಸಹಕಾರ ನೀಡಿದ್ದು, ಶಾಸಕ ಬಾಲಕೃಷ್ಣ ಹಾಗೂ ಅವರ ಪತ್ನಿ ಕುಸುಮಾ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದರು.

ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ 1ರಿಂದ 5ನೇ ತರಗತಿವರೆಗಿನ ಮಕ್ಕಳ ವಿವಿಧ ವೇಷಭೂಷಣ ಸ್ಪರ್ಧೆಯಲ್ಲಿ ಕಾಂತಾರ ಸಿನಿಮಾದ ತುಣುಕನ್ನು ಪ್ರದರ್ಶಿಸಿದ ಲಿಪಿಕಾ ಪ್ರಥಮ, ಶ್ರವಣಬೆಳಗೊಳದ ಚಾರುಕೀರ್ತಿ ಶ್ರೀಗಳನ್ನು ಹೋಲುವಂತೆ ವಸ್ತ್ರ ಧರಿಸಿದ ಸಂಪೂರ್ಣಾ ದ್ವಿತೀಯ, ಅಲ್ಫಿಯಾ ಫಾತಿಮಾ ಮೂರನೇ ಸ್ಥಾನ ಪಡೆದರು. ಜ್ಞಾನಸಾಗರ ಶಾಲೆಯ ವಿದ್ಯಾರ್ಥಿಗಳು ಕಂಸಾಳೆ ನೃತ್ಯ ಪ್ರದರ್ಶಿಸಿದರು. ಬಿಜಿಎಸ್ ಶಾಲೆಯ ದೃತ್ವಿ ಹಾಗೂ ವಿಸ್ಮಿತಾ ತಂಡದಿಂದ ಯೋಗ ನೃತ್ಯ ಪ್ರದರ್ಶನ ನಡೆಯಿತು.

ಶಾಲಿನಿ ವಿದ್ಯಾ ಶಾಲೆ, ಜ್ಞಾನಸಾಗರ ಪಬ್ಲಿಕ್ ಶಾಲೆ, ಸಪ್ತ ಸಾಗರ ಕಲಾನಿಕೇತನ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜ್ಞಾನಸಾಗರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಭಾರತಿ ನಾಗೇಶ್, ಪುರಸಭಾ ಮಾಜಿ ಅಧ್ಯಕ್ಷ ಸಿ.ಎನ್.ಶಶಿಧರ್, ಕೆಂಪೇಗೌಡ ವೇದಿಕೆ ಅಧ್ಯಕ್ಷ ಕಾಳೆನಳ್ಳಿ ಆನಂದ್, ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ವೆಂಕಟೇಶ್, ಮನೋಹರ್, ಎ. ಎಲ್. ನಾಗೇಶ್ ಇದ್ದರು.