ಮೈಸೂರು: ವಿದ್ಯಾರ್ಥಿಗಳು ಪಠ್ಯದ ಜತೆಗೆ ಕಲೆ, ಸಂಗೀತ, ನಾಟಕಗಳಂತಹ ಪಠ್ಯೇತರ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಾಗ ಜೀವನದಲ್ಲಿ ಪರಿಪೂರ್ಣತೆ ಕಾಣಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಆರ್.ಮಹೇಶ್ ಸಲಹೆ ನೀಡಿದರು.
ಕುವೆಂಪುನಗರದಲ್ಲಿರುವ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ರಂಗಾಂತರಂಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ನಾಟಕ ಮತ್ತು ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಗೀತ ಮತ್ತು ಕಲೆಗಳು ಚಂಚಲ ಮನಸ್ಸನ್ನು ದೂರ ಮಾಡಿ, ಏಕಾಗ್ರತೆ ಮೂಡಿಸುತ್ತದೆ. ಮನಸ್ಸನ್ನು ಉಲ್ಲಾಸ ಮೂಡಿಸುವ ಮೂಲಕ ಬದುಕನ್ನು ಹಸನಾಗಿಸಿ ಜೀವನದಲ್ಲಿ ಶಿಸ್ತು ಮೂಡಿಸುತ್ತವೆ ಎಂದರು.
ವಿದ್ಯಾರ್ಥಿಗಳು ಅಂಕ ಗಳಿಸುವುದೇ ಮುಖ್ಯವಲ್ಲ. ದಿನದಿಂದ ದಿನಕ್ಕೆ ಪ್ರಬುದ್ಧತೆ ಬೆಳೆಸಿಕೊಂಡು ಏನಾದರೂ ಸಾಧನೆ ಮಾಡಬೇಕು. ಸಾಧನೆ ಮಾಡಿದವರು ಮಾತ್ರ ಎಲ್ಲ ಕಾಲದಲ್ಲೂ ಜೀವಂತವಾಗಿರುತ್ತಾರೆ ಎಂದರು.
ಭಾರತ್ ಕ್ಯಾನ್ಸ್‌ರ್ ಆಸ್ಪತ್ರೆಯ ನಿರ್ದೇಶಕ ಡಾ.ಅಮರ್‌ಕುಮಾರ್ ಮಾತನಾಡಿ, ನಾವು ಯಾರೂ ಸಹ ಇಂತಹ ಧರ್ಮ, ಜಾತಿ, ದೇಶದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. 1952ರಿಂದ ಗಂಡಸಾಗಲಿ, ಹೆಂಗಸಾಗಲಿ, ಹಿಂದು, ಮುಸ್ಲಿಂ, ದಲಿತ, ಬ್ರಾಹ್ಮಣರಾಗಲಿ ಎಲ್ಲರೂ ಸರಿಸಮನಾಗಿ ಬಾಳುವಂತಹ ಸಂವಿಧಾನವನ್ನು ಅಂಬೇಡ್ಕರ್ ಈ ದೇಶಕ್ಕೆ ಕೊಟ್ಟಿದ್ದಾರೆ ಎಂದರು.
ಕಲೆ ದೇಶಕ್ಕೆ ಬಹಳ ಮುಖ್ಯವಾಗಿದ್ದು, ಯಾವ ದೇಶದಲ್ಲಿ ಕಲೆ, ಸಂಸ್ಕೃತಿ ಇಲ್ಲವೋ ಆ ದೇಶದಲ್ಲಿ ಜನರು ಹಿಂಸಾಮಾರ್ಗ ಹಿಡಿಯುತ್ತಾರೆ. ಆದ್ದರಿಂದ ಬುದ್ಧ, ಬಸವಣ್ಣ, ಅಂಬೇಡ್ಕರ್, ಕುವೆಂಪು ಹೇಳಿದಂತೆ ನಾವೆಲ್ಲರೂ ಒಂದೇ ಎಂದು ವಿಶ್ವಮಾನವರಾಗಿ ಬಾಳೋಣ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಮೇಘ, ವಿಸ್ತರಣಾಧಿಕಾರಿ ಸತೀಶ್ ಮಾತನಾಡಿದರು. ನಿಲಯ ಮೇಲ್ವಿಚಾರಕ ಜಿ. ಜಗದೀಶ್, ಯುವರಂಗ ನಿರ್ದೇಶಕ ಕೀರ್ತಿರಾಜ್, ನಿಲಯಪಾಲಕರಾದ ನಾಗರಾಜ್, ಚಿಕ್ಕವಡ್ಗಲ್ ನಾಗರಾಜ್, ರಮ್ಯ, ತೇಜಸ್ವಿನಿ, ನಾಗರಾಜ್, ನಾಗೇಶ್, ಭಾಗ್ಯಲಕ್ಷ್ಮೀ ಇದ್ದರು. ಬಳಿಕ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಕಿರಣ್‌ರಾಜ್ ನಿರ್ದೇಶನದ ಶೂರ್ಪನಖಿ ನಾಟಕ ಪ್ರದರ್ಶನಗೊಂಡಿತು.