ಜಿಲ್ಲೆ

ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಹೆಚ್ಚಾಗಲಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಿಳಾ ಸಬಲೀಕರಣದ ಸಂದೇಶವನ್ನು ನಾಟಕಗಳು, ಕವನಗಳು, ಹಾಡುಗಳು ಹೆಚ್ಚು ಪರಿಣಾಮಕಾರಿಯಾಗಿ ಸಾರುತ್ತವೆ ಎಂದು ಪತ್ರಗಾರ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಎಲಿಗಾರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪವು ಇತ್ತೀಚೆಗೆ ಆಯೋಜಿಸಿದ್ದ ಮಹಿಳಾ ಸಬಲೀಕರಣ ಕುರಿತ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಪನ್ಯಾಸಗಳಿಗಿಂತ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ರವಾನೆಯಾಗುವ ಸಂದೇಶಗಳು ಜನರ ಹೃದಯವನ್ನು ತಟ್ಟುತ್ತವೆ. ಹೀಗಾಗಿ ಅಂತಹ ಕಾರ್ಯಕ್ರಮಗಳು ಹೆಚ್ಚಾಗಿ ಆಯೋಜನೆಗೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಚಂದ್ರಕಾಂತ ಬೆಲ್ಲದ ಮಾತನಾಡಿ, ಆಧುನಿಕ ಮಹಿಳೆ ಈಗ ಸಾಕಷ್ಟು ಸಬಲಳಾಗಿದ್ದಾಳೆ. ಆದರೆ ಸಬಲ ಮಹಿಳೆಯರ ಸಂಖ್ಯೆ ಇನ್ನೂ ಹೆಚ್ಚಾಗಬೇಕು ಎಂದರು.
ಕರ್ನಾಟಕ ಕಲಾ ಕಾಲೇಜಿನ ತಂಡವು ಧೈರ್ಯಂ ಸರ್ವತ್ರ ಸಾಧನಂ ಮತ್ತು ಹುಬ್ಬಳ್ಳಿಯ ಮಂದಹಾಸ ಮಹಿಳಾ ಮಂಡಳ ತಂಡ ನನಸಾದ ಕನಸು ಎಂಬ ಎರಡು ಕಿರುನಾಟಕಗಳನ್ನು ಪ್ರದರ್ಶಿಸುವ ಮೂಲಕ ಮಹಿಳೆ ತನಗೆ ಬಂದ ಕಷ್ಟಗಳನ್ನು ಎದುರಿಸಿ ಹೇಗೆ ತನ್ನತನ ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಾಳೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ಪ್ರೊ. ಮಾಲತಿ ಪಟ್ಟಣಶೆಟ್ಟಿ, ವೀರಣ್ಣ ಒಡ್ಡೀನ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಅರವಿಂದ ಯಾಳಗಿ, ಡಾ. ಲಿಂಗರಾಜ ಅಂಗಡಿ, ಮಹಾಂತೇಶ ನರೇಗಲ್, ಎಸ್.ಬಿ. ಗುತ್ತಲ, ಎಂ.ಎಂ. ಚಿಕ್ಕಮಠ, ಮಂಗಲಾ ಚಿಗಟೇರಿ, ಡಾ. ಅರುಣಾ ಹಳ್ಳಿಕೇರಿ, ಜ್ಯೋತಿ ಭಾವಿಕಟ್ಟಿ, ರೇಖಾ ಅಂತಕ್ಕನವರ, ಇತರರು ಇದ್ದರು.
ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಾತಾ ಹಡಗಲಿ ನಿರೂಪಿಸಿದರು. ಡಾ. ವಿ. ಶಾರದಾ ವಂದಿಸಿದರು.