ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸತೀಶ್ ಉದ್ಘಾಟಿಸಿದರು. ನಂದೀಶ್, ಚಿಕ್ಕಮಲ್ಲಪ್ಪ, ರವೀಂದ್ರ, ದುಂಡು ಮಾದೇವು, ಚಂದ್ರಶೇಖರ್ ಇದ್ದರು. 
ಜಿಲ್ಲೆ

ದೇಶಿಪುರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಗುಂಡ್ಲುಪೇಟೆ: ತಾಲೂಕಿನ ಕಾಡಂಚಿನ ದೇಶಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಶಾಲಾ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಾಲೆಯ ಮುಖ್ಯಶಿಕ್ಷಕ ನಂದೀಶ್ ಮಾತನಾಡಿ, ಕಾಡಂಚಿನ ದೇಶೀಪುರ ಗ್ರಾಮಕ್ಕೆ ಐತಿಹಾಸಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ಹಿನ್ನೆಲೆ ಇದೆ. ಇಲ್ಲಿನ ಜನರು ವ್ಯವಸಾಯವನ್ನು ಜೀವನಾಧಾರವನ್ನಾಗಿಸಿ ಕೊಂಡಿದ್ದರೂ ಶಿಕ್ಷಣದ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದು, ಶಾಲೆಯ ಪ್ರತಿಯೊಂದು ಕಾರ್ಯಕ್ರಮವನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. 1954ರಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ ಕಲಿತ ಹಲವಾರು ಜನ ಬೇರೆ ಬೇರೆ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಮಾನಗಳನ್ನು ಹೊಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಇಲ್ಲಿನ ಮಕ್ಕಳು ಮುರಾರ್ಜಿ ಮತ್ತು ಆದರ್ಶ ಶಾಲೆಗಳಿಗೆ ಆಯ್ಕೆಯಾಗುತ್ತಿದ್ದಾರೆ. ಶಾಲೆಯನ್ನು ವಿವಿಧ ಸಂಘ ಸಂಸ್ಥೆಗಳು ಹಾಗೂ ದಾನಿಗಳು ಗ್ರಾಮಸ್ಥರ ಸಹಕಾರದಿಂದ ಅಭಿವೃದ್ಧಿಪಡಿಸಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ. ಈ ಗ್ರಾಮ ಧಾರ್ಮಿಕ ಉತ್ಸವಗಳು ಆಚರಣೆಗಳಿಗೆ ಹೆಸರುವಾಸಿಯಾಗಿದ್ದು, ಇಡೀ ತಾಲೂಕಿನಲ್ಲಿ ಮೊದಲ ಬಾರಿಗೆ ಒಂದು ಸಾವಿರ ಜನ ಏಕಕಾಲದಲ್ಲಿ ಕುಳಿತು ಊಟ ಮಾಡುವ ಪಾರ್ವತಾಂಬೆಯ ಊಟದ ಹಾಲ್ ನಿರ್ಮಾಣವಾಗುತ್ತಿದೆ ಎಂದರು.

ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸತೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚಿಕ್ಕಮಲ್ಲಪ್ಪ, ಇಸಿಒ ದುಂಡುಮಾದೇವು, ಸಿಆರ್‌ಪಿ ಚಂದ್ರಶೇಖರ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಸನ್ನ, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜು, ಪುಟ್ಟಮ್ಮ ಗಿರೀಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಮಾರ್, ತಾಲೂಕು ಪಂಚಾಯತಿ ಮಾಜಿ ಸದಸ್ಯ ನಾಗರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ರವೀಂದ್ರ ಗ್ರಾಮಸ್ಥರು, ಪಾಲಕರು, ವಿದ್ಯಾರ್ಥಿಗಳು ಇದ್ದರು.