ಜಿಲ್ಲೆ

ಸಾಂಸ್ಕೃತಿಕ ನಾಯಕ ಬಸವಣ್ಣ – ವಿಚಾರ ಸಂಕಿರಣ

ಸುನಿಲ್ ಪೊನ್ನೇಟಿ

ಮಡಿಕೇರಿ:

ಹನ್ನೆರಡನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣನ ನೇತೃತ್ವದಲ್ಲಿ ನಡೆದ ಶರಣ ಸಂಸ್ಕ್ರತಿ ಅದೊಂದು ಜನಸಮುದಾಯದ ಭಕ್ತಿಯ ತೀರ್ಥೋದ್ಭವ, ಮಾನವ ಕಲ್ಯಾಣದ ಆತ್ಮೋನ್ನತಿಯ ಮಹೋತ್ಸವ ಎಂದು ಕೊಡಗು ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ ಹೇಳಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮಡಿಕೇರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಸಾಂಸ್ಕ್ರತಿಕ ನಾಯಕ ಬಸವಣ್ಣ - ಹಾಗೂ ಮಡಿಕೇರಿ ಮಹದೇವಪೇಟೆಯ ಮುರುಗೇಶ್ ಮತ್ತು ಶಿವಮ್ಮ ಸ್ಥಾಪಿಸಿರುವ ಶೀಲವಂತ ಹಾಗೂ ಸಿದ್ದಲಿಂಗಪ್ರಸಾದ್ ದತ್ತಿ ಕಾರ್ಯಕ್ರಮ ಶರಣ ಸಂಸ್ಕ್ರತಿ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

900 ವರ್ಷಗಳ ಹಿಂದೆ ಅಂದಿನ ಶರಣರು ಕಟ್ಟಿದ ಹಾಗೂ ಸೃಷ್ಟಿಸಿದ ವಚನಗಳು ಎಲ್ಲಾ ಕಾಲಕ್ಕೂ ಅನ್ವಯವಾಗಿ ಇಂದಿನ ಆಧುನಿಕ ಕಾಲಘಟ್ಟದಲ್ಲಿಯೂ ಪ್ರಸ್ತುತತೆಯನ್ನು ಭಿತ್ತರಿಸುತ್ತಿವೆ. ಹನ್ನೆರಡನೇ ಶತಮಾನದಲ್ಲಿ ಧರ್ಮದ ಹೆಸರಿನಲ್ಲಿ ಮಾನವೀಯ ಮೌಲ್ಯಗಳು ಮಣ್ಣುಪಾಲಾಗುತ್ತಿದ್ದ ಮತಿ ಹೀನ ಗತಿಯನ್ನು ಗಮನಿಸಿ ನಡೆ - ನುಡಿ, ಶುದ್ಧವಾದ ಸರ್ವಸಮಾನತೆಯ ವೈಚಾರಿಕ ಸಮಾಜವನ್ನು ನಿರ್ಮಿಸಿದ್ದರ ಫಲವೇ ಬಸವಣ್ಣ ಸಾಂಸ್ಕ್ರತಿಕ ನಾಯಕನಾಗಿ ವಿಶ್ವಖ್ಯಾತಿಯಾಗಿದ್ದಾನೆ ಎಂದರು.


ಹಿAದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಮಡಿಕೇರಿ ತಾಲೂಕು ಅಧಿಕಾರಿ ಬಿಂದಿಯಾ ನಾಯಕ್ ಮಾತನಾಡಿ, ಮನುಷ್ಯರಾಡುವ ಮಾತು ಸತ್ಯ, ಸರಳ, ಸುಂದರವಾದಲ್ಲಿ ಸಮಾಜದಲ್ಲಿ ಯಾವುದೇ ಕಲಹಗಳಿಗೆ ಆಸ್ಪದವೇ ಇರುವುದಿಲ್ಲ. ಸಮಸ್ತ ಜೀವಿಗಳು ಸೇರಿದಂತೆ ಮನುಷ್ಯನ ಹುಟ್ಟಿಗೆ ಕಾರಣವಾದ ತಾಯಂದಿರ ಮುಟ್ಟನ್ನು ಹೀಗಳೆದು ಮಹಿಳೆಯರನ್ನು ಅವಮಾನಿಸಿ ಅಪಮಾನಿಸಿ ಮಹಿಳಾ ಹಕ್ಕುಗಳನ್ನು ಕಸಿದಿದ್ದ ಹನ್ನೆರಡನೇ ಶತಮಾನದ ವೈದಿಕಶಾಹಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಬಸವಣ್ಣ ಅಂದೇ ಮಹಿಳೆಯರಿಗೆ ಸಮಾನತೆ ಹಾಗೂ ಸ್ವಾತಂತ್ರ‍್ಯವನ್ನು ತಂದು ಕೊಟ್ಟ ಮಹಾನುಭಾವ ಎಂದರು.

ಗಾಳಿಬೀಡು ನವೋದಯ ವಿದ್ಯಾಲಯದ ಕನ್ನಡ ಉಪನ್ಯಾಸಕ ಮಾರುತಿ ದಾಸಣ್ಣನವರ್ " ಶರಣ ಸಂಸ್ಕ್ರತಿ " ಯ ಬಗ್ಗೆ ಪ್ರವಚನ ನೀಡಿ, ಹನ್ನೆರಡನೇ ಶತಮಾನದಲ್ಲಿ ವಿಶ್ವಕ್ಕೆ ಕರ್ನಾಟಕ ಕೊಡುಗೆಯಾಗಿ ಕೊಟ್ಟ ಶರಣ ಸಂಸ್ಕ್ರತಿ ಅದ್ಭುತ ಪರಿಕಲ್ಪನೆ. ಈ ಶರಣ ಸಂಸ್ಕ್ರತಿಯ ಮತ್ತೊಂದು ಪರಿಕಲ್ಪನೆಯಾದ ಮಹಾಮನೆಯಲ್ಲಿ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಡಿವಾಳ ಮಾಚಿದೇವ, ನುಲಿಯ ಚೆನ್ನಯ್ಯ, ಛಲಗಾರ ಹರಳಯ್ಯ, ಅಕ್ಕಮಹಾದೇವಿ, ಬಸವಣ್ಣ, ಅಲ್ಲಮ ಹೀಗೆ ನೂರಾರು ಮಂದಿ ಬೇರೆ ಬೇರೆ ಸ್ತರ ಸಮುದಾಯದ ಶರಣರು ಸಮ ಸಮಾಜ ನಿರ್ಮಾಣಕ್ಕೆ ನೀಡಿದ ಕೊಡುಗೆ ಕಾಲಾತೀತವಾದುದು ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಮೋಹನಕುಮಾರ್, ವಸತಿ ನಿಲಯದ ಮೇಲ್ವಿಚಾರಕಿ ಕರುಣಾಕ್ಷಿ ಹಾಗೂ ವಿದ್ಯಾರ್ಥಿನಿಯರು ಇದ್ದರು.