ಕೋಲಾರ: ತಾಲೂಕಿನ ವೇಮಗಲ್ನ ಸೀತಿ ರಸ್ತೆಯಲ್ಲಿರುವ ಕ್ರೀಡಾಂಗಣದಲ್ಲಿ ವೇಮಗಲ್ ಹೋಬಳಿ ಒಕ್ಕಲಿಗರ ಸಂಘದಿಂದ ನಾಡ ಪ್ರಭು ಕೆಂಪೇಗೌಡರ ಸಾಂಸತಿಕ ಹಬ್ಬವನ್ನು ಜು.13ರಂದು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಡಿ.ರಾಮಚಂದ್ರಗೌಡ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಮಠದ ಪೀಠಾಧಿಪತಿ ಶ್ರೀ ನಂಜಾವಧೂತ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ವೇಮಗಲ್ ಮಾರ್ಗದ ಕುರುಬರಹಳ್ಳಿ ಗೇಟ್ ಬಳಿಯಿಂದ 250 ಮಂದಿ ಮಹಿಳೆಯರ ಪೂರ್ಣಕುಂಭದೊಂದಿಗೆ ಶ್ರೀಗಳನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಗುವುದು.
ರೈತರು ಬೆಳೆದಿರುವ ಕೃಷಿ ಉತ್ಪನ್ನಗಳ ಗ್ರಾಮೀಣ ಸೂಗಡಿನ ಪ್ರದರ್ಶನದೊಂದಿಗೆ ಸಾಂಸತಿ ಕಲಾ ತಂಡಗಳು ಸಾಗಲಿವೆ. ಸುಮಾರು 1.5 ಕಿ.ಮಿ ಅದ್ದೂರಿ ಉತ್ಸವದ ಬಳಿಕ ಸಂಜೆ 4 ಗಂಟೆಗೆ ಕ್ರೀಡಾಂಗದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ವೇದಿಕೆಯಲ್ಲಿ ಜಯನಾಟ್ಯ ಕಲಾ ಅಕಾಡೆಮಿಯಿಂದ ನಾಟ್ಯ ಪ್ರದರ್ಶನ ಹಾಗೂ ಕೆಂಪೇಗೌಡರ ಇತಿಹಾಸದ ನೃತ್ಯ ರೂಪಕ ನೀಡಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕರಾದ ಅರ್ಜುನ್ಜನ್ಯ ಹಾಗೂ ಖ್ಯಾತ ನಿರುಪಕಿ ಅನುಶ್ರೀ ಹಾಗೂ ಚಲನಚಿತ್ರ ನಟರಾದ ಜಗ್ಗೇಶ್, ಶ್ರೀನಗರ ಕಿಟ್ಟಿ ಸೇರಿ ಅನೇಕ ಚಲನಚಿತ್ರ ನಟರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್, ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಬೆಂಗಳೂರು ಪೂರ್ವ ವಲಯ ಡಿ.ಸಿ.ಪಿ. ಡಿ.ದೇವರಾಜ್, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ, ದೆಹಲಿಯ ಒಕ್ಕಲಿಗರ ಸಂಘದ ಅಧ್ಯಕ್ಷ ನಾಗರಾಜ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ಸಮಾಜ ಸೇವಕ ಸಿ.ಎಂ.ಆರ್. ಶ್ರೀನಾಥ್, ರಾಜ್ಯ ಒಕ್ಕಲಿಗರ ಸಂಘದ ಸದಸ್ಯ ಡಾ.ರಮೇಶ್ ಸೇರಿ ಇತರರು ಭಾಗವಹಿಸಲಿದ್ದಾರೆ ಎಂದರು.