ಮಂಡ್ಯ: ನಗರದ ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ) ಮಂಡ್ಯ ವಿಶ್ವವಿದ್ಯಾಲಯವಾಗಿ ಪರಿವರ್ತನೆಯಾದ ಬಳಿಕ ಇದೇ ಮೊದಲ ಬಾರಿಗೆ ಅಂದರೆ ಜು.15ರಂದು ವಿವಿಯ ಆವರಣದಲ್ಲಿ ಸಾಂಸ್ಕೃತಿಕ ಹಬ್ಬ ಆಯೋಜಿಸಲಾಗಿದೆ ಎಂದು ಕುಲಪತಿ ಡಾ.ಪುಟ್ಟರಾಜು ತಿಳಿಸಿದರು.
ಮಂಡ್ಯ ವಿವಿಯ ವ್ಯಾಪ್ತಿ 47 ಕಾಲೇಜುಗಳನ್ನು ಒಳಗೊಂಡಿದೆ. ವಿವಿಯಲ್ಲೇ 4500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಷ್ಟೂ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಪ್ರಥಮ ಬಾರಿಗೆ ಸಾಂಸ್ಕೃತಿಕ ಹಬ್ಬ ಸಂಘಟಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಾಂಸ್ಕೃತಿಕ ಹಬ್ಬದಲ್ಲಿ ಸುಮಾರು 4000 ಮಕ್ಕಳು ಭಾಗಿಯಾಗಲಿದ್ದಾರೆ. ಬೆಳಗ್ಗೆ ವೇದಿಕೆ ಸಮಾರಂಭದ ಉದ್ಘಾಟನೆ ಬಳಿಕ ಸಂಜೆವರೆವಿಗೂ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವರು. ಒಂದು ರೀತಿಯಲ್ಲಿ ಜಾನಪದ ಉತ್ಸವ, ಸಂತೆ ಮಾದರಿಯಲ್ಲಿ ಸಂಘಟಿಸಲಾಗಿದೆ. ಜಾನಪದ ಸಂಗೀತ, ನೃತ್ಯ, ಸಾಮೂಹಿಕ ಗೀತಗಾಯನ, ನೃತ್ಯ ಪ್ರದರ್ಶನಕ್ಕೆ ಆದ್ಯತೆ ನೀಡಲಾಗಿದೆ. ತಿಂಡಿ-ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಸಂಬಂಧ 10-15ಮಳಿಗೆಗಳನ್ನು ಹಾಕಲಾಗುತ್ತಿದೆ. ವಿದ್ಯಾರ್ಥಿಗಳು ತಾವೇ ಸಿದ್ಧಪಡಿಸಿದ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮಾತ್ರವಲ್ಲದೆ ಹಳ್ಳಿಗಳಲ್ಲಿ ವಿಶೇಷವೆನಿಸಿದ ತಿನಿಸುಗಳನ್ನು ತರಿಸಿ ಪ್ರದರ್ಶಿಸಿ, ಮಾರಾಟ ಮಾಡಬಹುದು ಎಂದು ತಿಳಿಸಿದರು.
ಮಂಡ್ಯ ವಿಶ್ವವಿದ್ಯಾಲಯಕ್ಕೆ 2023-24ನೇ ಶೈಕ್ಷಣಿಕ ವರ್ಷದಿಂದ ಮಂಡ್ಯ ಜಿಲ್ಲೆಯ 47 ಕಾಲೇಜುಗಳ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಳಪಡಲಿದ್ದಾರೆ. ಮುಂದಿನ ದಿನಗಳಲ್ಲಿ ಈ ಎಲ್ಲ 47 ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಯತ್ನಿಕ್ ಡೇ, ಅಂತರ ಕಾಲೇಜು ಸ್ಪರ್ಧೆಗಳು, ಅಂತರ ವಿವಿ ಸ್ಪರ್ಧೆಗಳನ್ನು ನಡೆಸಲು ಆಲೋಚಿಸಲಾಗಿದೆ. 15ರಂದು ಬೆಳಗ್ಗೆ 9ಕ್ಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ. ಮಂಡ್ಯ ವಿವಿ ಕುಲಪತಿ ಡಾ.ಪುಟ್ಟರಾಜು ಅಧ್ಯಕ್ಷತೆ ವಹಿಸುವರು. ಶಾಸಕ ರವಿಕುಮಾರ್ ಗಣಿಗ ಬಹುಮಾನ ವಿತರಣೆ ಮಾಡುವರು ಎಂದು ವಿವರಿಸಿದರು.