ಜಿಲ್ಲೆ

ಸಾಮರಸ್ಯದ ಬದುಕಿಗೆ ಸಂಸ್ಕಾರಯುತ ಶಿಕ್ಷಣ ಅಗತ್ಯ: ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಅಭಿಮತ

ಮೈಸೂರು: ಸಾಮರಸ್ಯದಿಂದ ಬದುಕಲು ಸಂಸ್ಕಾರಯುತ ಶಿಕ್ಷಣ ಅಗತ್ಯವಾಗಿದೆ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.
ಊಟಿಯ ತೀಟಕಲ್‌ನ ಜೆಎಸ್‌ಎಸ್ ಪಬ್ಲಿಕ್ ಶಾಲೆ ಆವರಣದಲ್ಲಿ ಶ್ರೀವೀರಸಿಂಹಾಸನ ಮಹಾಸಂಸ್ಥಾನ ಮಠ ಸುತ್ತೂರು ಕ್ಷೇತ್ರ, ಜೆಎಸ್‌ಎಸ್ ಮಹಾವಿದ್ಯಾಪೀಠ ಹಾಗೂ ಶ್ರೀಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಿರುವ ಜೀವನೋತ್ಸಾಹ ಶಿಬಿರದ ಎರಡನೇ ದಿನವಾದ ಬುಧವಾರ ಸಾಮರಸ್ಯದ ಬದುಕು ಕುರಿತು ಉಪನ್ಯಾಸ ನೀಡಿದರು.
ನಮ್ಮ ಸಂಸ್ಕೃತಿ ಹಾಗೂ ನಂಬಿಕೆ ಗಟ್ಟಿಯಾಗಿದ್ದಲ್ಲಿ ಬದುಕು ಸಾಮರಸ್ಯದಿಂದ ಕೂಡಿರುತ್ತದೆ. ಜೀವನದಲ್ಲಿ ಅಹಂಕಾರ ಮತ್ತು ಕೀಳರಿಮೆ ಬೆಳೆಸಿಕೊಳ್ಳಬಾರದು. ನಮ್ಮ ಚಿಂತನೆಗಳು ಕೇವಲ ಧನಾತ್ಮಕವಾಗಿರಬೇಕು. ಎಲ್ಲರನ್ನು ಸಮಾನವಾಗಿ ಕಾಣುವುದರಿಂದ ಬದುಕನ್ನು ಶಾಂತಗೊಳಿಸಿಕೊಳ್ಳಬಹುದು. ಬದುಕಿನ ಮೌಲ್ಯಗಳನ್ನು ತಿಳಿದು ಸಾರ್ಥಕ ಜೀವನದೆಡೆಗೆ ನಡೆಯಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಮನಸ್ಸನ್ನು ಕೆಡಿಸಲು ಹಲವು ಮಾರ್ಗಗಳಿವೆ. ಅವುಗಳನ್ನೂ ಮೀರಿ ನಮ್ಮಲ್ಲಿರುವ ವಿಷಯಾಸಕ್ತಿಗಳನ್ನು ನಿಯಂತ್ರಿಸಿಕೊಳ್ಳಬೇಕು. ತ್ಯಾಗ ಜೀವನ ಅತ್ಯುತ್ತಮವಾದುದು ಎಂದು ಹೇಳಿದರು.
ಮೈಸೂರು ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ಶೆಣೈ ಮಾತನಾಡಿ, ನಿಯಮಿತ ಆಹಾರ ಮತ್ತು ಉತ್ತಮ ಜೀವನ ವಿಧಾನ ದೀರ್ಘಾಯುಷ್ಯಕ್ಕೆ ಕಾರಣವಾಗಿದೆ. ಆಯುರ್ವೇದದ ಮನೆಮದ್ದಿನ ಬಗ್ಗೆ ತಿಳಿವಳಿಕೆ ಪಡೆದುಕೊಂಡು ನಿರೋಗಿಗಳಾಗಿ ಬದುಕುವುದು ಇಂದಿನ ಆಧುನಿಕ ಜಗತ್ತಿನಲ್ಲಿ ಅನಿವಾರ‌್ಯವಾಗಿದೆ ಎಂದು ತಿಳಿಸಿದರು.
ವಿಶ್ವದಲ್ಲಿ ಈಗ ಆಯುರ್ವೇದದ ಮಹತ್ವ ಹೆಚ್ಚಾಗಿದೆ. ಇದು ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. ನಮ್ಮ ಅಡುಗೆ ಮನೆಯಲ್ಲ್ಲಿಯೇ ಅನೇಕ ಆಯುರ್ವೇದದ ಔಷಧಗಳನ್ನು ಕಾಣಬಹುದು. ಪ್ರಕೃತಿ ಮತ್ತು ದೇಹಕ್ಕೆ ಅವಿನಾಭಾವ ಸಂಬಂಧವಿದ್ದು, ಋತುಮಾನಕ್ಕೆ ತಕ್ಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎನ್ನುವುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.
ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪ ಪೊಲೀಸ್ ಅಧೀಕ್ಷಕ ಎಚ್.ಎಸ್. ರೇಣುಕಾರಾಧ್ಯ ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ಸೈಬರ್ ಕ್ರೈಂ ಎನ್ನುವುದು ಸಾಮಾಜಿಕ ಪಿಡುಗಾಗಿದೆ. ಸಾಮಾಜಿಕ ಜಾಲತಾಣಗಳಿಂದ ಮೋಸ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸೈಬರ್ ಕ್ರೈಂಗೆ ಒಳಗಾಗುವವರು ಹೆಚ್ಚು ವಿದ್ಯಾವಂತರೆ ಆಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮೊಬೈಲ್‌ಗಳನ್ನು ಎಚ್ಚರಿಕೆಯಿಂದ ಬಳಸಬೇಕು, ಮಕ್ಕಳಿಗೆ ಮೊಬೈಲ್ ಬಳಕೆಯ ಬಗ್ಗೆ ಪಾಲಕರು ತಿಳಿವಳಿಕೆ ನೀಡಬೇಕು. ನಮ್ಮ ಅಜಾಗರೂಕತೆಯಿಂದ ಸೈಬರ್ ಕ್ರೈಂಗಳಾಗುತ್ತವೆ. ಬ್ಯಾಂಕಿಂಗ್ ವ್ಯವಹಾರಗಳ ಸಮಯದಲ್ಲಿ ನಮ್ಮ ಮೊಬೈಲ್‌ಗಳಿಗೆ ಬರುವ ಕರೆ ಮತ್ತು ಸಂದೇಶಗಳ ಬಗ್ಗೆ ಜಾಗೃತರಾಗಿದ್ದರೆ ಇದರಿಂದ ಉಂಟಾಗುವ ಅನಾಹುತಗಳನ್ನು ತಡೆಗಟ್ಟಬಹುದು ಎಂದು ಸಲಹೆ ನೀಡಿದರು.
ಬಳಿಕ ಸಂಜೆ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಕೊಯಮತ್ತೂರಿನ ಪೆರೂರೂ ಆದಿನಂ ಮಠದ ಶ್ರೀಮರುದಾಚಲ ಸ್ವಾಮೀಜಿ, ನಮ್ಮ ದೇಹ ಮತ್ತು ಪ್ರಫುಲ್ಲಗೊಳ್ಳಲು ಇಂತಹ ಜೀವನೋತ್ಸಾಹ ಶಿಬಿರಗಳು ಅಗತ್ಯವಿದೆ. ಸುತ್ತೂರಿನ ಪರಮಪೂಜ್ಯ ಎರಡು ರಾಜ್ಯಗಳಿಗೆ ಆಧ್ಯಾತ್ಮಿಕ ಕೊಂಡಿಯಾಗಿದ್ದಾರೆ ಎಂದು ಬಣ್ಣಿಸಿದರು.
ಚಿಕ್ಕತಿಪ್ಪೂರು ಶಿವಪೂಜಾ ಮಠದ ಶ್ರೀಚೆನ್ನವೀರ ಸ್ವಾಮೀಜಿ ವಚನ ಗಾಯನ ನಡೆಸಿಕೊಟ್ಟರೆ, ಹರವೆ ವಿರಕ್ತ ಮಠದ ಶ್ರೀಸರ್ಪಭೂಷಣ ಸ್ವಾಮೀಜಿ ಹಿತನುಡಿಗಳನ್ನಾಡಿದರು.
ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ-ಧ್ಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು, ಸಂಜೆ ದೇಸಿ ಆಟಗಳನ್ನು ಆಡಿದರು. ಸಾಮೂಹಿಕ ಪ್ರಾರ್ಥನೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾಂಗ್ಲಿ ಜಿಲ್ಲೆ, (ಮಹಾರಾಷ್ಟ್ರ) ಕಲಬುರಗಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಧಾರಾವಾಡ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು, ಹಾಸನ ಹಾಗೂ ಮೈಸೂರು ಜಿಲ್ಲೆಗಳಿಂದ 230ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ.