ಜಿಲ್ಲೆ

ಪಠ್ಯಕ್ಕಿಂತ ಸಂಸ್ಕಾರದ ಶಿಕ್ಷಣ ಅತಿಮುಖ್ಯ

 ಶ್ರೀ ಮಂಗಳನಾಥ ಸ್ವಾಮೀಜಿ ಅಭಿಮತ | ಹಂಡಿಗನಾಳದಲ್ಲಿ ಜ್ಞಾನಾಂಕುರ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ

ವಿದ್ಯಾವಂತ ಕೆಡಬಹುದು, ಆದರೆ, ಸಂಸ್ಕಾರವಂತ ಎಂದಿಗೂ ಕೆಡುವುದಿಲ್ಲ. ಹಾಗಾಗಿ ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರ ಕಲಿಸುವ ಕೆಲಸ ಆಗಬೇಕಿದೆ ಎಂದು ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದ ಹಂಡಿಗನಾಳದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಜ್ಞಾನಾಂಕುರ-2025 ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಮಾತನಾಡಿದರು.

ಮಕ್ಕಳಿಗೆ ಶಾಲೆಯಲ್ಲಿ ಸಿಗುವ ಪಠ್ಯ ಶಿಕ್ಷಣದ ಜತೆಗೆ ಮನೆಯಲ್ಲಿ ಪಾಲಕರು ಕಲಿಸುವ ಸಂಸ್ಕಾರದ ಶಿಕ್ಷಣ ಅತಿಮುಖ್ಯ, ಮಕ್ಕಳು ದೇಶದ ಆಸ್ತಿಯಾಗಿದ್ದು ಅವರ ಭವಿಷ್ಯ ರೂಪಿಸುವ ಆಸೆ ಎಲ್ಲ ಪಾಲಕರಿಗಿರುತ್ತದೆ. ಅದಕ್ಕೆ ಪೂರಕವಾಗಿ ಆಧುನಿಕ ಜಗತ್ತಿನ ಪ್ರವೇಶಕ್ಕೆ ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿಯೇ ಅಣಿೊಳಿಸುವುದು ಶ್ರೀಮಠದ ಉದ್ದೇಶವಾಗಿದೆ. ಹುಟ್ಟಿದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕಿದೆ ಎಂದರು.

ಮಕ್ಕಳು ಶಾಲೆಯಲ್ಲಿ ಗುರುಗಳು ಹೇಳಿದ್ದನ್ನು ಕೇಳುವುದಕ್ಕಿಂತ ಹೆಚ್ಚಾಗಿ ಪಾಲಕರನ್ನು ಅನುಕರಣೆ ಮಾಡಿ ಕಲಿಯುವುದು ಹೆಚ್ಚು. ಹಾಗಾಗಿ ಪ್ರತಿಯೊಬ್ಬ ಪಾಲಕರೂ ಮಕ್ಕಳ ಮುಂದೆ ಸಂಸ್ಕಾರಯುತವಾಗಿ ನಡೆದುಕೊಳ್ಳಬೇಕು ಎಂದರು.

ಬಿಜಿಎಸ್ ಪಬ್ಲಿಕ್ ಶಾಲೆ ಹಾಗೂ ತಾಲೂಕಿನ ದಿಬ್ಬೂರಹಳ್ಳಿಯ ಬಿಜಿಎಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮಕ್ಕಳಿಗೆ ಶ್ರೀಗಳು ಅಕ್ಷರಾಭ್ಯಾಸ ಮಾಡಿಸಿದರು. ಶ್ರೀ ಕೆಂಪಣ್ಣಸ್ವಾಮಿ ಶ್ರೀ ವೀರಣ್ಣಸ್ವಾಮಿ ದೇವಾಲಯ ಟ್ರಸ್ಟ್‌ನ ಉಪಾಧ್ಯಕ್ಷ ಬಿಳಿಶಿವಾಲೆ ರವಿ, ಕಾರ್ಯದರ್ಶಿ ಅಶ್ವತ್ಥಯ್ಯ, ಚಿತ್ರ ನಿರ್ಮಾಪಕ ಶಂಕರೇಗೌಡ, ಬಿಜಿಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಆರ್.ಮಹದೇವ್, ಮತ್ತಿತರರು ಹಾಜರಿದ್ದರು.

ಗಂಡು-ಹೆಣ್ಣು ತಾರತಮ್ಯ ಬೇಡ:

ಬಿಜಿಎಸ್ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಡಾ. ಎನ್.ಶಿವರಾಮರೆಡ್ಡಿ ಮಾತನಾಡಿ, ಯಾವುದೇ ಕಾರಣಕ್ಕೂ. ಮನೆಯಲ್ಲಿರುವ ಮಕ್ಕಳಲ್ಲಿ ಗಂಡು ಹೆಣ್ಣು ಎಂಬ ತಾರತಮ್ಯ ಮಾಡದೇ, ಎಲ್ಲ ಕೆಲಸಗಳನ್ನು ಮಕ್ಕಳಿಂದಲೇ ಮಾಡಿಸಬೇಕು. ಅವರ ಸಮಸ್ಯೆಗಳಿಗೆ ಅವರೇ ಪರಿಹಾರ ಕಂಡುಕೊಳ್ಳುವ ರೀತಿ ಮಕ್ಕಳನ್ನು ಬೆಳೆಸಬೇಕು. ಒಂದು ಮಗು ಪದವಿ ಪಡೆಯಬೇಕಾದರೆ ಸುಮಾರು 19 ವರ್ಷ ಶಾಲಾ, ಕಾಲೇಜುಗಳಲ್ಲಿ ಕಲಿಯಬೇಕಿದೆ, ಹಾಗಾಗಿ ಪಾಲಕರು ತಿಂಗಳಿಗೊಮ್ಮೆಯಾದರೂ ಮಗು ಕಲಿಯುತ್ತಿರುವ ಶಾಲೆಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಮಾತುಕತೆ ನಡೆಸುವುದನ್ನು ರೂಢಿಸಿಕೊಳ್ಳಬೇಕು ಎಂದರು.