ಜಿಲ್ಲೆ

ಶಿವಮೊಗ್ಗದಲ್ಲಿ 26ರಿಂದ ಅದ್ಧೂರಿ ಸಾಂಸ್ಕೃತಿಕ ದಸರಾ ಆಚರಣೆ: ಎಸ್.ಜಿ.ರಾಜು

Shivamogga

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ದಸರಾ-2022ರ ಅಂಗವಾಗಿ ಸೆ. 26ರಿಂದ ಅಕ್ಟೋಬರ್ 4ರವರೆಗೆ ವಿವಿಧ ಸ್ಥಳಗಳಲ್ಲಿ ಸಾಂಸ್ಕೃತಿಕ ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಸಾಂಸ್ಕೃತಿಕ ದಸರಾ ಸಮಿತಿ ಅಧ್ಯಕ್ಷ ಎಸ್.ಜಿ.ರಾಜು ತಿಳಿಸಿದರು.

26ರಂದು ಬೆಳಗ್ಗೆ 9.30ಕ್ಕೆ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಭಜನಾ ವೈಭವ ಕಾರ್ಯಕ್ರಮವನ್ನು ಜಿ.ಅರುಣ್‌ಕುಮಾರ್ ನೇತೃತ್ವದ ತಂಡ ನಡೆಸಿಕೊಡಲಿದೆ. ನಂತರ ಮಾತೆಯರಿಂದ ಸಾಮೂಹಿಕ ಲಲಿತಾ ಸಹಸ್ರನಾಮ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

27ರಂದು ಬೆಳಗ್ಗೆ 9.30ರಿಂದ ಸಂಜೆ 4ರವರೆಗೆ ಹಾಗೂ 28ರಂದು ಮಧ್ಯಾಹ್ನ 12.15ಕ್ಕೆ ಫ್ರೀಡಂಪಾರ್ಕ್‌ನ ಮುಖ್ಯ ವೇದಿಕೆಯಲ್ಲಿ ಜಿಲ್ಲಾಮಟ್ಟದ ಡೊಳ್ಳು, ವೀರಗಾಸೆ ಮತ್ತು ತಮಟೆ ಸ್ಪರ್ಧೆ ನಡೆಯಲಿದೆ. 29ರಂದು ಸಂಜೆ 5ರಿಂದ 9.30ರವರೆಗೆ ಕಮಲಾ ನೆಹರು ಕಾಲೇಜಿನಲ್ಲಿ ಸಾಹಿತ್ಯ ಸಂಭ್ರಮ ನಡೆಯಲಿದೆ. ಅ.3ರ ಸಂಜೆ 5ಕ್ಕೆ ಫ್ರೀಡಂಪಾರ್ಕ್‌ನಲ್ಲಿ ನಾಟ್ಯ ಸಂಭ್ರಮವನ್ನು ಚಿತ್ರನಟ ರಮೇಶ್‌ಭಟ್ ಉದ್ಘಾಟಿಸುವರು. ನಂತರ ಸ್ಥಳೀಯ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ಮತ್ತು ವಾದ್ಯ ಸಂಭ್ರಮ ನಡೆಯಲಿದೆ ಎಂದರು.

3ರಂದು ಸಂಜೆ 5.30ರಿಂದ ಕುವೆಂಪು ರಂಗಮಂದಿರದಲ್ಲಿ ಯಕ್ಷ ಸಂಭ್ರಮ, 4ರಂದು ಸಂಜೆ 5.30ಕ್ಕೆ ಫ್ರೀಡಂಪಾರ್ಕ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಂಎಲ್‌ಸಿ ಆಯನೂರು ಮಂಜುನಾಥ್ ಉದ್ಘಾಟಿಸಲಿದ್ದು, ಮೈಸೂರಿನ ನೃತ್ಯ ನಾಟ್ಯಾಲಯ ಯೋಗ ಕೇಂದ್ರದ ತಂಡದಿಂದ ಒಡಿಸ್ಸಿ ನೃತ್ಯ ಹಾಗೂ ಇತರೆ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 5ರ ಸಂಜೆ 5.30ಕ್ಕೆ ಫ್ರೀಡಂಪಾರ್ಕ್‌ನಲ್ಲಿ ಅಂತಾರಾಷ್ಟ್ರೀಯ ಜಾನಪದ ಕಲಾವಿದರಾದ ಡಾ. ಸುಬ್ಬನಹಳ್ಳಿ ರಾಜು ಮತ್ತು ರಾಜಪ್ಪ ಅವರಿಂದ ಜಾನಪದ ಸಂಭ್ರಮ ನಡೆಯಲಿದೆ ಎಂದರು. ಸಮಿತಿ ಸದಸ್ಯರಾದ ಎಸ್.ಜ್ಞಾನೇಶ್ವರ್, ಎಸ್.ಶಿವಕುಮಾರ್, ಸದಸ್ಯ ಕಾರ್ಯದರ್ಶಿ ಸಿದ್ದಪ್ಪ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.