raichur  
ಜಿಲ್ಲೆ

ಸ್ಲಂ ನಿವಾಸಿಗಳ ಸಾಂಸ್ಕೃತಿಕ ಸಮಾವೇಶ ಹಾಗೂ ಸ್ಲಂ ಹಬ್ಬ *ಸರ್ಕಾರದಿಂದ ಸ್ಲಂ ಜನರಿಗೆ ಮೂಲಭೂತ ಸೌಲಭ್ಯ ಸಿಗಲಿ-ಎಂ.ವಿರುಪಾಕ್ಷಿ

ರಾಯಚೂರು ನಗರದದ ಹಿಂದಿ ವರ್ಧಮಾನ ಶಾಲೆಯ ಹತ್ತಿರ ಸ್ಲಂನಲ್ಲಿ ವಾಸಿಸುವ ಜನರು ವಸತಿ ಇಲ್ಲದೇ ರಸ್ತೆಯ ಮೇಲೆಯೇ ಗಲೀಜು ನೀರಿನಲ್ಲಿಯೇ ಕಳೆದ 5 ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ. ಕುಡಿಯುವ ನೀರು, ಶೌಚಾಲಯ, ರಸ್ತೆ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು.

ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಸ್ಲಂ ನಿವಾಸಿಗಳ ಸಾಂಸ್ಕೃತಿಕ ಸಮಾವೇಶ ಹಾಗೂ ಸ್ಲಂ ಹಬ್ಬವನ್ನು ಉದ್ದೇಶಿಸಿ ಮಾತನಾಡಿದರು. ಗುತ್ತಿಗೆದಾರರು ಸ್ಲಂ ಜನರ ಹಣ್ವನ್ನು ಲೂಟಿ ಹೊಡೆಯುತ್ತಿದ್ದು, ಇದರಿಂದ ನಗರದಲ್ಲಿರುವ ಎಲ್ಲಾ ಸ್ಲಂ ನಿವಾಸಿಗಳ ಮನೆಗಳು ಅರ್ಧಕ್ಕೆ ನಿಂತುಹೋಗಿವೆ ಎಂದರು.

ಸ್ಲಂ ಜನರಿಗೆ ಸಿಗಬೇಕಾದ ಸೌಲಭ್ಯ ಹಾಗೂ ಯೋಜನೆಗಳ ಹಣವನ್ನು ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಿಂದು ತೇಗುತ್ತಿದ್ದಾರೆ ಅದೇ ಸ್ಲಂ ಜನರು ದಿನ ನಿತ್ಯ ನರಕಯಾತನೆಯಲ್ಲಿ ಬದುಕನ್ನು ನಡೆಸುತ್ತಿದ್ದಾರೆ. ಸ್ಲಂಗಳಲ್ಲಿ ರಸ್ತೆಗಳು, ಚರಂಡಿಗಳು ಹಾಗೂ ಮನೆಗಳನ್ನು ನಿರ್ಮಾಣ ಮಾಡದೇ ಬಿಲ್ಲುಗಳನ್ನು ಮಾತ್ರ ಎತ್ತಿಕೊಂಡು ತಿಂದಿದ್ದಾರೆ

ಎಂದು ದೂರಿದರು.

ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ನಗರದಲ್ಲಿ ಸಾಂಸ್ಕೃತಿಕ ಸಮಾವೇಶ ಹಾಗೂ ಎಲ್ಲಾ ಕಡೆ ಸ್ಲಂ ಜನರ ಹಬ್ಬವನ್ನು ಆಚರಣೆ ಮಾಡುತ್ತಿರುವುದು ವಿಶೇಷ ಹಾಗೂ ಆಶ್ಚರ್ಯದ ಸಂಗತಿಯಾಗಿದೆ. 2007ರಲ್ಲಿ ಪ್ರಾರಂಭವಾಗಿ ಸ್ಲಂ ಜನಾಂದೋಲನ ಇಲ್ಲಿಯವರೆಗೆ ನಡೆದುಕೊಂಡು ಬಂದಿರುವುದು ಮುಂದಿನ ತಲೆಮಾರಿಗೂ ಈ ಒಗ್ಗಟ್ಟು ಹೀಗೆ ಇರಬೇಕು ಎಂದರು. ಸಮಾಜದಲ್ಲಿ ಸ್ಲಂ ಜನರ ಮೇಲೆ ಎಷ್ಟೆ ದೌರ್ಜನ್ಯಗಳಾದರೂ ಇಲ್ಲಿಯ ಜನ ಒಗ್ಗಟ್ಟಾಗಿ ತಮ್ಮ ಸಂಸ್ಕೃತಿ ಪ್ರತಿರೋಧವನ್ನು ಎತ್ತಿ ಹಿಡಿದಿದ್ದಾರೆ. ಸ್ಲಂ ಎಂದರೆ ಸಮಾಜದ ಕಳಂಕವೆಂದು ಹೇಳಲಾಗುತ್ತದೆ ಅಂತಹ ಸ್ಥಳಗಳಲ್ಲಿ ಜನರು ಬದುಕುತ್ತಿದ್ದೇವೆ. ನೆಲೆದ ಮೂಲ ಸಂಸ್ಕೃತಿಯನ್ನು ಉಳಿಸುವವರು ಸ್ಲಂ ಜನರು ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮೊದಲು ನಗರದ ಅಂಬೇಡ್ಕರ್ ವೃತ್ತದಿಂದ ರಂಗಮಂದಿರದ ವರೆಗೆ ವಿವಿಧ ಕಲಾ ತಂಡಗಳಿಂದ ಮೆರವಣಿಗೆ ನಡೆಸಲಾಯಿತು.

 

ಈ ಸಂದರ್ಭದಲ್ಲಿ ಎಂಎಲ್ಸಿ ಎ.ವಸಂತ ಕುಮಾರ, ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಜಿಲ್ಲಾಧ್ಯಕ್ಷ ಜನಾರ್ಧನ ಜಾಲಿಬೆಂಚಿ, ಮಾಜಿ ಜಿಪಂ ಸದಸ್ಯೆ ಹೇಮಾವತಿ, ಪಾಳಿಕೆ ಸದಸ್ಯ ಎಂ.ಪವನ್‌ಕುಮಾರ, ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್, ದಲಿತ ಮುಖಂಡರಾದ ಅಂಬಣ್ಣ ಅರೋಲಿಕರ್, ಎಂ.ಆರ್.ಭೇರಿ, ಕೆಪಿಸಿಸಿ ವಕ್ತಾರ ರಝಾಕ್ ಉಸ್ತಾದ್, ಎಸ್.ರಾಜು, ಕರ್ನಾಟಕ ಕೊಳಚೆ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ದೇವೇಂದ್ರ ಕುಮಾರ, ರೇಣುಕಾ ಸರಡಗಿ, ನೂರ್ ಜಹಾನ್, ಜನಾರ್ಧನ ಹಳ್ಳಿಬೆಂಚಿ, ಕೆ.ಪಿ.ಅನಿಲ್‌ಕುಮಾರ, ಶೋಭಾ, ಅಜಯ್ ಸೇರಿದಂತೆ ಅನೇಕರು ಇದ್ದರು.