ಜಿಲ್ಲೆ

ಮೊಬೈಲ್‌ನಿಂದಾಗಿ ಸಾಂಸ್ಕೃತಿಕ ಬದಲಾವಣೆ : ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಬೇಸರ

ಮೈಸೂರು: ಮೊಬೈಲ್‌ನಿಂದಾಗಿ ಸಾಂಸ್ಕೃತಿಕ ಬದಲಾವಣೆ ಆಗುತ್ತಿದ್ದು, ಇತ್ತೀಚಿನ ವರ್ಷದಲ್ಲಿ ಕ್ಯಾಲೆಂಡರ್ ಸಂಸ್ಕೃತಿಯೂ ನಶಿಸುತ್ತಿದೆ ಎಂದು ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಬೇಸರ ವ್ಯಕ್ತಪಡಿಸಿದರು.

ವನ್ಯಜೀವಿ ಛಾಯಾಗ್ರಾಹಕ ಜಿ.ಎಸ್.ರವಿಶಂಕರ್ ಹಾಗೂ ಎಸ್.ಆರ್. ಮಧುಸೂದನ್ ಅವರು ಸೆರೆ ಹಿಡಿದಿರುವ ವನ್ಯಜೀವಿಗಳ ಚಿತ್ರ ಆಧರಿಸಿ ಹೊರ ತಂದಿರುವ ಕ್ಯಾಲೆಂಡರ್ ಹಾಗೂ ಟೇಬಲ್ ಟಾಪ್ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

ಹಿಂದೆ ಪ್ರತಿಯೊಬ್ಬರ ಮನೆಯಲ್ಲಿಯೂ ಕ್ಯಾಲೆಂಡರ್ ದಿಕ್ಸೂಚಿ ಆಗಿರುತ್ತಿತ್ತು. ಆದರೆ, ಇತ್ತೀಚೆಗೆ ಮೊಬೈಲ್‌ನಿಂದಾಗಿ ಆ ಸಂಸ್ಕೃತಿ ನಶಿಸುತ್ತಿದೆ. ಹೀಗಾಗಿ ಎಷ್ಟು ಮಂದಿ ಕ್ಯಾಲೆಂಡರ್ ಬಳಸುತ್ತಾರೆ ಎಂಬ ಪ್ರಶ್ನೆ ಎದ್ದಿರುವ ಈ ದಿನಗಳಲ್ಲಿ ವನ್ಯಜೀವಿ ಆಧಾರಿಸಿ ಹೊರ ತಂದಿರುವ ಕ್ಯಾಲೆಂಡರ್ ಆಕರ್ಷಕವಾಗಿದೆ ಎಂದರು.

ವನ್ಯಜೀವಿ ಛಾಯಾಗ್ರಾಹಕ ಸೇನಾನಿ ಮಾತನಾಡಿ, ಈ ಕ್ಯಾಲೆಂಡರ್ ಮೂಲಕ ವನ್ಯಜೀವಿ, ಪ್ರಾಣಿ ಪಕ್ಷಿಗಳ ಕುರಿತು ಜಾಗೃತಿಗೆ ಸಹಕಾರಿಯಾಗಿದೆ. ಪ್ರಮುಖವಾಗಿ ಪಕ್ಷಿಗಳು, ಅವುಗಳ ಪ್ರಭೇದದ ಮಾಹಿತಿ ಇದ್ದು, ಇದನ್ನು ನೋಡಿದ ನೂರು ಮಕ್ಕಳಲ್ಲಿ ಒಂದು ಮಗುವಾದರೂ ಇದು ಯಾವ ಪಕ್ಷಿ ಎಂದು ಕೇಳಿದಲ್ಲಿ ವನ್ಯಜೀವಿ ಸಂರಕ್ಷಣೆ ನಿಟ್ಟಿನಲ್ಲಿ ಮೊದಲನೆಯದಾಗಿ ಅವುಗಳ ಬಗ್ಗೆ ಪ್ರೀತಿ ಬೆಳೆಸಿದಂತಾಗುತ್ತದೆ ಎಂದರು.

ನಿವೃತ್ತ ಅರಣ್ಯಾಧಿಕಾರಿ ಕಾಂತರಾಜ್, ಛಾಯಾಗ್ರಾಹಕ ಸುವರ್ಣ, ಜಿ.ಎಸ್.ರವಿಶಂಕರ್, ಎಸ್.ಆರ್.ಮಧುಸೂದನ್, ಸ್ನೇಕ್ ಶ್ಯಾಂ ಇತರರು ಇದ್ದರು.