ಜಿಲ್ಲೆ

ಕಲೆಯಿಂದ ಜೀವನಕ್ಕೆ ಸಂಸ್ಕಾರ : ಡಾ.ಅನುಪಮ ಭಟ್ ಆಶಯ

ಸುಬ್ರಹ್ಮಣ್ಯ: ಕಲೆಯನ್ನು ನಮ್ಮ ಬದುಕಿನ ಭಾಗವಾಗಿ ಇರಿಸಿಕೊಳ್ಳುವುದು ಅತ್ಯಗತ್ಯ. ಕಲೆ ಜೀವನಕ್ಕೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೋಧಿಸುತ್ತದೆ. ಕೇವಲ ನೃತ್ಯ ಸಂಗೀತ ಮಾತ್ರ ಕಲೆಯಲ್ಲ. ಬದುಕುವುದು ಕೂಡಾ ಒಂದು ವಿಶಿಷ್ಟ ಕಲೆ. ಸಾಂಸ್ಕೃತಿಕವಾಗಿ ತೊಡಗಿಸಿಕೊಂಡರೆ ನಮಗೆ ಬದುಕುವ ಕಲೆ ಕರಗತವಾಗುತ್ತದೆ. ಎಳವೆಯಲ್ಲೇ ಕಲೆಯನ್ನು ಬೆಳೆಸಿಕೊಂಡರೆ ಶಿಸ್ತುಬದ್ದ ಜೀವನಕ್ಕೆ ಪೂರಕ ಎಂದು ದಂತ ವೈದ್ಯೆ ಮತ್ತು ಕಾಲೇಜಿನ ಹಳೇ ವಿದ್ಯಾರ್ಥಿನಿ ಡಾ.ಅನುಪಮ ಭಟ್ ಮುಳ್ಳೇರ್ಯ ಹೇಳಿದರು.

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಅಂಗವಾಗಿ ನಡೆದ ಸಾಂಸ್ಕೃತಿಕ ವೈಭವಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಎಸ್‌ಎಸ್ ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯಗುರು ನಂದಾ ಹರೀಶ್, ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್, ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್ ಆರ್., ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್., ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವೆಂಕಟೇಶ್ ಎಚ್.ಎಲ್., ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಪ್ರಥ್ವಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.