ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತರ ಮಹಾ ವಿದ್ಯಾಲಯಗಳ ಯುವಜನೋತ್ಸವದಲ್ಲಿ ಕಂಡು ಬಂದ ಸಾಂಸ್ಕೃತಿಕ ಕಲರವದ ಝಲಕ್.  
ಜಿಲ್ಲೆ

ಅಕ್ಕನ ಅಂಗಳದಲ್ಲಿ ಸಾಂಸ್ಕೃತಿಕ ಕಲರವ, ರಂಗೇರಿದ ಯುವಜನೋತ್ಸವ

ವಿಜಯಪುರ: ಕಲೆ, ಸಾಹಿತ್ಯ, ನಾಟಕ, ಏಕಪಾತ್ರಾಭಿನಯ, ನೃತ್ಯ ಮತ್ತಿತರ ಕಲಾ ಪ್ರಕಾರಗಳು ಅಕ್ಕನ ಅಂಗಳದ ಕಳೆ ಹೆಚ್ಚಿಸಿವೆ !

ರಾಜ್ಯದ ಏಕೈಕ ಮಹಿಳಾ ವಿಶ್ವ ವಿದ್ಯಾಲಯ ಖ್ಯಾತಿಯ ತೊರವಿಯ ಅಕ್ಕಮಹಾದೇವಿ ವಿಶ್ವ ವಿದ್ಯಾಲಯದಲ್ಲಿ ಶಕ್ತಿ ಸಂಭ್ರಮ-2024 ರ ಅಂಗವಾಗಿ ನಡೆಯುತ್ತಿರುವ ಅಂತರ ಮಹಾ ವಿದ್ಯಾಲಯಗಳ ಯುವಜನೋತ್ಸವ ರಂಗೇರಿದ್ದು, ನಾಡಿನ ನಾನಾ ಭಾಗಗಳಿಂದ ಬಂದ ವಿದ್ಯಾರ್ಥಿನಿಯರು ತಮ್ಮ ಪ್ರತಿಭೆ ಅನಾವರಣಗೊಳಿಸುತ್ತಿದ್ದಾರೆ. ಆ ಮೂಲಕ ಯುವಜನೋತ್ಸವದ ಮೆರಗು ಹೆಚ್ಚಿಸಿದ್ದು, ವಿವಿಧ ಸಾಂಸ್ಕೃತಿಕ, ಸಾಹಿತ್ಯಿಕ ಕಲಾ ಪ್ರಕಾರಗಳು ಜನಮನಸೂರೆಗೊಳ್ಳುತ್ತಿವೆ.

ಗುರುವಾರ ವಿಶ್ವ ವಿದ್ಯಾಲಯದ ಮೂಲೆ-ಮೂಲೆಗಳಲ್ಲೂ ಸಂಗೀತ, ಕಲೆ, ನೃತ್ಯದ ಸದ್ದು ಮಾರ್ದನಿಸುತ್ತಿತ್ತು. ವಾದ್ಯಗಳ ನಿನಾದ ದಿಕ್ಕು ದಿಕ್ಕುಗಳಿಗೂ ಹರಡಿತ್ತು. ಚುಮುಚುಮು ಚಳಿಯಲ್ಲಿ ನೃತ್ಯ, ನಾಟಕಗಳು ಬೆಚ್ಚನೆ ಅನುಭವ ನೀಡಿದವು. ಪ್ರೇಕ್ಷಕರ ಮನಸ್ಸನ್ನು ಆಹ್ಲಾದಕರಗೊಳಿಸಿದವು. ಚಿತ್ರಕಲೆ ಕಣ್ಮನ ಸೆಳೆದರೆ ಜನಪದ ಕಲೆ ಮೈ-ಮನ ತಣಿಸಿತು. ಚರ್ಚೆ,, ಕ್ವಿಜ್ ಮತ್ತು ಭಾಷಣಗಳು ವೈಚಾರಿಕ ಅನುಭವ ಹೆಚ್ಚಿಸಿದರೆ ಛಾಯಾಗ್ರಹಣ ನಯನಗಳಿಗೆ ತಂಪೆರೆಯಿತು.

ನಾಟಕ ವಿಭಾಗದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿನಿಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರಲ್ಲದೇ ಅರ್ಥಪೂರ್ಣತೆ ಹೆಚ್ಚಿಸಿದರು. ಏಕಾಂಕ ನಾಟಕದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು ತಮ್ಮ ಮನೋಭಾವನೆಗಳು ಮತ್ತು ಪ್ರಬೋಧನಾತ್ಮಕ ಸಂದೇಶಗಳ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದರು. ಜನಪದ ನೃತ್ಯ ಸ್ಪರ್ಧೆಯಲ್ಲಿ, ಹಳ್ಳಿಗಳ ಸಂಸ್ಕೃತಿಯ ಸಂವೇದನೆಗಳನ್ನು ನೃತ್ಯದ ಮೂಲಕ ಅನಾವರಣಗೊಳಿಸಿದರು.

ಸಂಗೀತ ವಿಭಾಗದಲ್ಲಿ, ಕರ್ನಾಟಕ-ಹಿಂದೂಸ್ತಾನಿ ಶೈಲಿಯ ಗಾಯನದಿಂದ ಪ್ರಾರಂಭವಾಗಿ ಪಾಶ್ಚಾತ್ಯ ಶ್ರೇಣಿಯ ಮೆಲೋಡಿಯವರೆಗೆ ವಿವಿಧ ರೀತಿಯ ಹಾಡುಗಳು ಮನಸ್ಸಿಗೆ ಮುದ ನೀಡಿದವು. ಇದರ ಜೊತೆಗೆ ಡೊಳ್ಳು ಕುಣಿತ ಮತ್ತು ವಿವಿಧ ಕಲಾತ್ಮಕ ಪರಿಕಲ್ಪನೆಗಳು ಶ್ರೋತೃಗಳ ಮನಸೂರೆಗೊಂಡವು.

ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರು ತಾವು ಅನುಭವಿಸಿದ ಬುದ್ಧಿವಂತಿಕೆ ಮತ್ತು ಭಾವನೆಗಳನ್ನು ಬಣ್ಣಗಳ ಮೂಲಕ ವ್ಯಕ್ತಪಡಿಸಿದರು. ಪ್ರತಿಯೊಂದು ಚಿತ್ರವೂ ತನ್ನದೇ ಆದ ಕಥೆಯನ್ನು ಹೇಳುವಂತಿದ್ದು, ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಸಾಹಿತ್ಯ ವಿಭಾಗದಲ್ಲಿ, ಚರ್ಚೆ ಮತ್ತು ಭಾಷಣ ಸ್ಪರ್ಧೆಗಳು ವಿದ್ಯಾರ್ಥಿನಿಯರಿಗೆ ತಾವು ತೊಡಗಿಸಿಕೊಂಡಿರುವ ವಿಷಯಗಳ ಬಗ್ಗೆ ತಮ್ಮ ಮನೋಭಾವನೆಗಳನ್ನು ಪ್ರದರ್ಶಿಸಲು ಅವಕಾಶ ನೀಡಿತು.

ಛಾಯಾಗ್ರಹಣ ಸ್ಪರ್ಧೆಯು ವಿದ್ಯಾರ್ಥಿನಿಯರಿಗೆ ತಮ್ಮ ಸೃಜನಾತ್ಮಕ ದೃಷ್ಟಿಕೋನವನ್ನು ವ್ಯಕ್ತಪಡಿಸಲು ಒಂದು ಹೊಸ ವೇದಿಕೆ ಒದಗಿಸಿತು. ಪ್ರಾಕೃತಿಕ ಸೌಂದರ್ಯದ ಚಿತ್ರಣ, ಜನಜೀವನದ ಸಂವೇದನೆ, ಮತ್ತು ಸಾಂಸ್ಕೃತಿಕ ಪರಿಕಲ್ಪನೆಗಳು ಅವರು ಸೆರೆಹಿಡಿದ ಛಾಯಚಿತ್ರಗಳಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡವು.

ಪ್ರತಿ ವಿಭಾಗದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು ತಮ್ಮ ಉತ್ಸಾಹವನ್ನು ತೋರುತ್ತಿದ್ದರು. ಈ ಸ್ಪರ್ಧೆ ನನ್ನಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಿದೆ, ಕಲಾತ್ಮಕ ಕೌಶಲವನ್ನು ಪ್ರದರ್ಶಿಸಲು ಇದು ಒಂದು ಉತ್ತಮ ವೇದಿಕೆ. ಈ ರೀತಿಯ ಕಾರ್ಯಕ್ರಮಗಳು ನಮ್ಮನ್ನು ಸಾಂಸ್ಕೃತಿಕವಾಗಿ ಹಾಗೂ ವೈಯಕ್ತಿಕವಾಗಿ ಬೆಳೆಸಲು ಸಹಾಯ ಮಾಡುತ್ತವೆ ಎಂದು ಸ್ಪರ್ಧಾಳುಗಳು ಮನಸ್ಸಿನ ಮಾತು ಹಂಚಿಕೊಂಡರು.