ಹನೂರಿನ ಜಿ.ವಿ.ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ಧ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಮಂಜುನಾಥ ಪ್ರಸನ್ನ, ಲಾಜರಸ್, ನಂಜುಂಡಯ್ಯ, ಫರ್ಹನಾ ಬೇಗಂ, ಸವಿತಾ ಇತರರಿದ್ದರು. 
ಜಿಲ್ಲೆ

ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ

ನಾಗೇಶ ಎಸ್

ಹನೂರು: ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಕಲಿಕೆಯತ್ತ ಹೆಚ್ಚು ಗಮನ ನೀಡಬೇಕು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಪ್ರಸನ್ನ ತಿಳಿಸಿದರು.

ಪಟ್ಟಣದ ಜಿ.ವಿ.ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ದೇಶದ ಭವಿಷ್ಯವನ್ನು ರೂಪಿಸುವ ರೂವಾರಿಗಳು. ಅಭಿವೃದ್ಧಿ ವಿದ್ಯಾರ್ಥಿಗಳ ಮೇಲಿದೆ. ಹಾಗಾಗಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಹಲವು ಸವಲತ್ತುಗಳನ್ನು ಒದಗಿಸುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಂಡು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು. ಇದರಿಂದ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಇನ್ನು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಯನ್ನು ಪಡೆದಿರುವ ಅಧಿಕಾರಿಗಳ ಬಗ್ಗೆ ಅವಲೋಕಿಸಿದಾಗ ಹೆಚ್ಚು ಗ್ರಾಮೀಣ ಪ್ರದೇಶ ಹಾಗೂ ಸರ್ಕಾರಿ ಶಾಲೆ, ಕಾಲೇಜಿನಲ್ಲಿಯೇ ಶಿಕ್ಷಣ ಪಡೆದಿರುವವರೇ ಆಗಿದ್ದಾರೆ. ಇದಕ್ಕೆ ಗುಣಮಟ್ಟದ ಶಿಕ್ಷಣವೇ ಕಾರಣ. ಜತೆಗೆ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳು ಇನ್ನೂ ಉಳಿದಿವೆ ಎಂದರೆ ಅದಕ್ಕೆ ಗ್ರಾಮೀಣ ಪ್ರದೇಶದ ಬಡ ವರ್ಗದ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿರುವುದೇ ಕಾರಣವಾಗಿದೆ ಎಂದು ತಿಳಿಸಿದರು.

ಪ್ರಾಂಶುಪಾಲ ಲಾಜರಸ್, ಉಪನ್ಯಾಸಕರಾದ ನಂಜುಂಡಯ್ಯ, ಫರ್ಹನಾ ಬೇಗಂ, ಸವಿತಾ, ಶಿವಕುಮಾರ್, ಮಹೇಂದ್ರ, ಹರೀಶ್‌ಕುಮಾರ್, ದೇವಿಕಾ, ಸುಮತಿ, ಚೈತ್ರಾ, ನಂದಿನಿ, ನರ್ಮದಾ ಮತ್ತಿತರರು ಹಾಜರಿದ್ದರು.