ಮಂಡ್ಯ: ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ಗೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 2023-24 ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜಿಗೆ ಅಗತ್ಯವಿರುವ ಕೊಠಡಿಗಳು, ಶೌಚಗೃಹ, ರಸ್ತೆ ಸೇರಿದಂತೆ ಕಾಲೇಜಿನ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.
ಕಾಲೇಜಿಗೆ ಬೇಕಿರುವ ಸೌಲಭ್ಯವನ್ನು ಒದಗಿಸಲು ನಮ್ಮ ಸರ್ಕಾರ ಸದಾ ಮುಂದಿದೆ. ಪ್ರಮುಖವಾಗಿ ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಮೊದಲ ಹಂತದಲ್ಲಿಯೇ ಕೊಡಿಸುವುದಕ್ಕೆ ಪ್ರಯತ್ನ ಪಡುತ್ತೇನೆ. ಮಹಿಳೆಯರು ಯಾವ ಕ್ಷೇತ್ರದಲ್ಲೂ ಕಡಿಮೆಯಿಲ್ಲ. ರಾಜಕೀಯ, ಸಿನಿಮಾ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇದು ಮಹಿಳಾ ಸಬಲೀಕರಣಕ್ಕಿಟ್ಟ ದಾಪುಗಾಲಾಗಿದೆ. ಮಹಿಳೆಯರಲ್ಲಿ ಪ್ರಾಮಾಣಿಕತೆ ಹಾಗೂ ಜವಾಬ್ದಾರಿ ಹೆಚ್ಚಿದೆ. ಕುಟುಂಬವನ್ನು ಒಟ್ಟಿಗೆ ಕರೆದೊಯ್ಯುವ ಸಾಮಾರ್ಥ್ಯವಿದೆ. ಹಾಗಾಗಿ ನಮ್ಮ ಸರ್ಕಾರ ಮಹಿಳೆಯರನ್ನು ಅರ್ಥಿಕವಾಗಿ ಅಭಿವೃದ್ಧಿ ಪಡಿಸಲು ಯೋಜನೆಗಳನ್ನು ನೀಡಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಆರ್.ದಶರಥ ಅಧ್ಯಕ್ಷತೆ ವಹಿಸಿದರು. ಶಾಸಕ ರವಿಕುಮಾರ್ ಗಣಿಗ ಬಹುಮಾನ ವಿತರಣೆ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ವಿಮರ್ಶಕ ಮೈಸೂರು ಕೃಷ್ಣಮೂರ್ತಿ, ಪಿಎಸ್‌ಐ ವರ್ಷಾ, ಪ್ರಾಧ್ಯಾಪಕರಾದ ಡಾ.ಕೆಂಪಮ್ಮ, ಡಾ.ಎಚ್.ಎಸ್.ಶಿವರಾಜು, ವೈ.ಕೆ.ಭಾಗ್ಯ, ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಟಿ.ಕೆ.ಹರ್ಷಿತಾ, ಉಪಾಧ್ಯಕ್ಷರಾದ ಎಚ್.ಎಂ.ವರ್ಷಿಣಿ, ಎಸ್.ಪ್ರಿಯದರ್ಶಿನಿ ಇತರರಿದ್ದರು.