ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನೀಲಗಿರಿ ತೆರವು ಆಂದೋಲನಕ್ಕೆ ಮೊದಲ ಯಶಸ್ಸು ಸಿಕ್ಕಿದೆ. ತೆರವುಗೊಂಡ ಭೂಮಿಯಲ್ಲಿ ಈ ಬಾರಿ ರಾಗಿ ಬಿತ್ತನೆಯಾಗಿದ್ದು, ಸುಮಾರು 2500 ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚುವರಿ ಇಳುವರಿ ನಿರೀಕ್ಷೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಅಂತರ್ಜಲಕ್ಕೆ ಕಂಕಟವಾಗಿದ್ದ ನೀಲಗಿರಿ ತೆರವುಗೊಳಿಸುವಂತೆ ದೊಡ್ಡಮಟ್ಟದ ಕೂಗೆದ್ದಿತು. ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಕರೀಗೌಡ, ಜಿಲ್ಲೆಯಲ್ಲಿ ನೀಲಗಿರಿ ತೆರವಿಗೆ ದೊಡ್ಡಮಟ್ಟದಲ್ಲಿ ಆಂದೋಲನಕ್ಕೆ ಚಾಲನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ನೀಲಗಿರಿ ತೆರವು ಚುರುಕುಗೊಂಡಿತ್ತು. ಹಲವು ಕೃಷಿಕರು ಸ್ವಯಂಪ್ರೇರಣೆಯಿಂದ ಮುಂದೆ ಬಂದು ನೀಲಗಿರಿ ತೆರವಿಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ್ದರು. ಇದರ ಲವಾಗಿ ಹೆಕ್ಟೇರ್‌ಗಟ್ಟಲೆ ನೀಲಗಿರಿ ಮರಗಳ ತೆರವು ನಡೆದಿತ್ತು.
1 ವರ್ಷದ ಅವಧಿಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳು ಸೇರಿ ಸುಮಾರು 2500 ಹೆಕ್ಟೇರ್‌ನಷ್ಟು ಜಮೀನಿನಲ್ಲಿ ನೀಲಗಿರಿ ತೆರವುಗೊಳಿಸಲಾಗಿದೆ. ಈಗ ಅದೇ ಭೂಮಿಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ.
ಡಿಸಿ ಚಾಲನೆ: ಜಿಲ್ಲಾಧಿಕಾರಿಯಾಗಿರುವ ಪಿ.ಎನ್.ರವೀಂದ್ರ ಅವರು ಜಿಲ್ಲೆಯಲ್ಲಿ ನೀಲಗಿರಿ ತೆರವು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಿದ್ದು, ಜಮೀನು ಮಾಲೀಕರು ಮನವೊಲಿಸುವ ಕೆಲಸ ನಡೆಯುತ್ತಿದೆ. ರೈತರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೀಲಗಿರಿ ಮರ ತೆರವುಗೊಳಿಸಿ ಇದೇ ಭಾಗದಲ್ಲಿ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ತೋಟಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ: ನೆಲಮಂಗಲ ತಾಲೂಕು ಸೋಂಪುರ ಹೋಬಳಿ ತಟ್ಟಿಕೆರೆ ಗ್ರಾಮದ ಹಲವೆಡೆ ನೀಲಗಿರಿ ತೆರವುಗೊಳಿಸಿ ಅದೇ ಭೂಮಿಯಲ್ಲಿ ಮಾವು, ಸೀಬೆ ಬೆಳೆದು ರೈತರು ಸೈ ಎನಿಸಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ಜಿಲ್ಲಾಧಿಕಾರಿ ಖುದ್ದು ತೋಟಕ್ಕೆ ಭೇಟಿ ನೀಡಿ ಸೀಬೆ ಸವಿದು ರೈತರ ಬೆನ್ನುತಟ್ಟಿದ್ದರು. ಇದರಿಂದ ಉತ್ತೇಜಿತರಾದ ಮತ್ತಷ್ಟು ರೈತರು ನೀಲಗಿರಿ ತೆರವಿಗೆ ಮುಂದೆ ಬಂದಿದ್ದಾರೆ ಎನ್ನಲಾಗಿದೆ.
ಕೃಷಿ ಇಲಾಖೆ ಸಾಥ್: ನೀಲಗಿರಿ ತೆರವುಗೊಳಿಸಿ ಕೃಷಿ ಚಟುವಟಿಕೆ ನಡೆಸಲು ಮುಂದಾಗಿರುವ ರೈತರಿಗೆ ಕೃಷಿ ಇಲಾಖೆಯೂ ಸಾಥ್ ನೀಡಿದೆ. ಕೃಷಿ ಚಟುವಟಿಕೆಗಳಿಗೆ ಬೇಕಾದ ಪರಿಕರ, ಸಲಕರಣೆ ಹಾಗೂ ಇನ್ನಿತರ ಮಾಹಿತಿ ನೀಡುವ ಮೂಲಕ ಕೃಷಿ ಚಟುವಟಿಕೆ ಉತ್ತೇಚಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದೆ. ಕೆರೆ-ಕುಂಟೆಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಅಂತರ್ಜಲ ಮಟ್ಟವೂ ಸುಧಾರಿಸುತ್ತಿದೆ. ಕೃಷಿ ಚಟುವಟಿಕೆಗಳಿಗೆ ಉತ್ತಮ ವಾತಾವರಣವಿದೆ. ಮುಂದಿನ ದಿನಗಳಲ್ಲಿ ನೀಲಗಿರಿ ತೆರವು ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲಾಗುವುದು. ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 62 ಸಾವಿರ ಹೆಕ್ಟೇರ್‌ನಲ್ಲಿ ಇಳುವರಿ ನಿರೀಕ್ಷೆ ಇದೆ. ಇದರೊಂದಿಗೆ ನೀಲಗಿರಿ ತೆರವುಗೊಳಿಸಿರುವ ಸುಮಾರು 2500 ಹೆಕ್ಟೇರ್ ಪ್ರದೇಶದಲ್ಲೂ ಬಿತ್ತನೆ ಚುರುಕುಗೊಂಡಿದ್ದು, ಹೆಚ್ಚು ಇಳುವರಿ ನಿರೀಕ್ಷೆ ಇದೆ. ಜಯಸ್ವಾಮಿ, ಜಂಟಿ ನಿರ್ದೇಶಕ, ಕೃಷಿ ಇಲಾಖೆ ಬೆಂ.ಗ್ರಾಮಾಂತರ