ಗದ್ದೆಯಲ್ಲಿ ಬೇಸಾಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು. 
ಜಿಲ್ಲೆ

ಹಡಿಲು ಗದ್ದೆಯಲ್ಲಿ ಬೇಸಾಯ : ಭತ್ತ ಕೃಷಿ ಕುಂಠಿತದ ನಡುವೆ ಪ್ರಯತ್ನ : ಆತಂಕ ಹುಟ್ಟಿಸುವ ಅಂಕಿ-ಅಂಶ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ವರ್ಷ ಕಳೆದಂತೆ ಭತ್ತದ ಕೃಷಿ ಕುಸಿತವಾಗುತ್ತಿರುವ ನಡುವೆಯೇ ಅಮ್ಟಾಡಿ ಗ್ರಾಮದಲ್ಲಿ ಕೃಷಿಕ ದಂಪತಿ ಕಳೆದ 25 ವರ್ಷಗಳಿಂದ ಹಡಿಲು ಬಿದ್ದ ಗದ್ದೆಯಲ್ಲಿ ಈ ಬಾರಿ ಭತ್ತದ ಬೇಸಾಯಕ್ಕೆ ಮುಂದಾಗಿದ್ದು, 1.70 ಎಕರೆ ವಿಸ್ತೀರ್ಣದಲ್ಲಿ ಈಗಾಗಲೇ ನೇಜಿ ನಾಟಿ ಕಾರ್ಯ ಪೂರ್ಣಗೊಳಿಸಿದ್ದಾರೆ. ಭತ್ತ ಬೇಸಾಯ ವಿಸ್ತೀರ್ಣದ ಬಂಟ್ವಾಳ ತಾಲೂಕಿನ ಅಂಕಿ-ಅಂಶ ಆತಂಕ ಹುಟ್ಟಿಸುತ್ತಿದ್ದು, 2013-14ರಲ್ಲಿ 23,750 ಎಕರೆ ಇದ್ದ ಭತ್ತದ ಬೇಸಾಯ 2024-25ಕ್ಕೆ ಬರೀ 3750 ಎಕರೆಗೆ ಇಳಿದಿದೆ.

ಅಮ್ಟಾಡಿ ಗ್ರಾಮದ ಬಾಂಬಿಲಪದವು ನಿವಾಸಿಗಳಾದ ಅರುಣ್ ಡಿಸೋಜ-ವಿಲ್ಮಾ ಅವರೇ ಹಡಿಲು ಗದ್ದೆಯಲ್ಲಿ ಬೇಸಾಯ ಆರಂಭಿಸಿರುವ ದಂಪತಿ. ಅವರು ಈ ಕಾರ್ಯಕ್ಕೆ ನೆರೆಹೊರೆಯವರು ಕೂಡ ಸಾಥ್ ನೀಡಿದ್ದಾರೆ. ದಂಪತಿ ತಮ್ಮ ಕುಟುಂಬದ ಗದ್ದೆ 1.20 ಎಕರೆ ಹಾಗೂ ಪಕ್ಕದವರ 50 ಸೆಂಟ್ಸ್ ಗದ್ದೆ ಸೇರಿ ಒಟ್ಟು 1.70 ಎಕರೆಯಲ್ಲಿ ಬೇಸಾಯ ಮಾಡಿದ್ದಾರೆ.

ಚಾಪೆ ನೇಜಿ ಪದ್ಧತಿ ನಾಟಿ

ಅರುಣ್ ಡಿಸೋಜ ಅವರು ಸಾಕಷ್ಟು ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗದಲ್ಲಿ 7ವರ್ಷಗಳ ಹಿಂದೆ ಊರಿಗೆ ಮರಳಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಈ ಹಿಂದೆ ಹಡೀಲು ಗದ್ದೆಯಲ್ಲಿ ನೇಂದ್ರ ಬಾಳೆ ಕೃಷಿ ಮಾಡಿದ್ದು, ಈ ಬಾರಿ ಭತ್ತದ ಬೇಸಾಯ ಮಾಡಬೇಕು ಎಂಬ ಆಸಕ್ತಿಯಿಂದ ಗದ್ದೆಗಿಳಿದಿದ್ದಾರೆ. ನಿರೀಕ್ಷೆಯಂತೆ ಎಕರೆಯಲ್ಲಿ ಸುಮಾರು 25-30 ಕ್ಷಿಂಟಾಲ್ ಭತ್ತ ಬರಬೇಕಿದ್ದು, ಆದರೆ ಹಡೀಲು ಗದ್ದೆಯಾದ ಕಾರಣ ಮೊದಲ ವರ್ಷ ನಿರೀಕ್ಷಿತ ಫಸಲು ಬರುವ ಸಾಧ್ಯತೆ ಕಡಿಮೆ ಇದೆ ಎನ್ನುತ್ತಾರೆ. ಮಂಗಳೂರು ಎಕ್ಕೂರಿನ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ)ದಿಂದ ಭತ್ತದ ಬೀಜವನ್ನು ಪಡೆದು ಅದನ್ನು ಲೊರೆಟ್ಟೋದ ಪಶುಪತಿಯವರಿಗೆ ನೀಡಿ ಅವರು ನೇಜಿ ಮಾಡಿ ಕೊಟ್ಟು ಅವರದ್ದೇ ಬಾಡಿಗೆ ಯಂತ್ರದ ಮೂಲಕ ಚಾಪೆ ನೇಜಿ ಪದ್ಧತಿಯಲ್ಲಿ 20 ದಿನಗಳ ನೇಜಿಯನ್ನು ಸುಮಾರು 18 ದಿನಗಳ ಹಿಂದೆ ನಾಟಿ ಮಾಡಲಾಗಿದೆ.

ಹಡಿಲು ಗದ್ದೆಯಲ್ಲಿ ನೇಜಿ ನಾಟಿ ಮಾಡಿರುವುದು.

ಸಹ್ಯಾದ್ರಿ ಪಂಚಮುಖಿ ತಳಿ

ಅರುಣ್ ಅವರು ತಮ್ಮ ಹಡೀಲು ಗದ್ದೆಯ ಬೇಸಾಯಕ್ಕೆ ಸಹ್ಯಾದ್ರಿ ಪಂಚಮುಖಿ ಎಂಬ ಹೊಸ ತಳಿಯನ್ನು ಆಯ್ಕೆ ಮಾಡಿಕೊಂಡಿದ್ದು, ಅದರಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿ, ಇಳುವರಿ ಜಾಸ್ತಿ ಇರುವುದರ ಜತೆಗೆ 12 ದಿನಗಳ ಕಾಲ ಮಳೆ ನೀರು ಗದ್ದೆಯಲ್ಲಿ ನಿಂತರೂ ನೇಜಿ ಕೊಳೆತು ಹೋಗುವುದಿಲ್ಲ.

ಬಂಟ್ವಾಳದಲ್ಲಿ ಭತ್ತದ ಬೇಸಾಯ ಕುಸಿತ

ಬಂಟ್ವಾಳ ತಾಲೂಕಿನಲ್ಲಿ ವರ್ಷ ಕಳೆದಂತೆ ಭತ್ತದ ಕೃಷಿ ಕುಸಿಯುತ್ತಿದ್ದು, ಅದರ ಅಂಕಿ ಅಂಶಗಳು ಹೀಗಿವೆ.

  • 2013-14- 23,750 ಎಕರೆ
  • 2014-15- 21,365 ಎಕರೆ
  • 2015-16- 19,825
  • 2016-17- 16,450
  • 2017-18- 14,335
  • 2018-19-12,425
  • 2019-20-10,675
  • 2020-21- 8,450
  • 2021-22-6350
  • 2022-23-5675
  • 2023-24- 4650
  • 2024-25- 3750
25 ವರ್ಷಗಳ ಹಿಂದೆ ನಮ್ಮ ಗದ್ದೆಗಳಲ್ಲಿ ಹಿರಿಯರು ಕೃಷಿ ಮಾಡುತ್ತಿದ್ದು, ಬಳಿಕ ಅವರಿಗೆ ವಯಸ್ಸಾದ್ದರಿಂದ ಗದ್ದೆಯ ಕಡೆಗೆ ಹೋಗುವವರಿರಲಿಲ್ಲ. ಪ್ರಸ್ತುತ ಹಡೀಲು ಬಿದ್ದ ಗದ್ದೆಯಲ್ಲಿ ಆಸಕ್ತಿಯಿಂದ ಬೇಸಾಯಕ್ಕೆ ಇಳಿದಿದ್ದೇವೆ. ಹಡೀಲು ಗದ್ದೆಯಾದ ಕಾರಣ ಈ ಬಾರಿ ಫಸಲು ಕೊಂಚ ಕಡಿಮೆ ಬರಬಹುದು. ಸಣ್ಣ ವಯಸ್ಸಿನಲ್ಲಿ ಬೇಸಾಯವನ್ನು ನೋಡಿದ್ದು, ಬಿಟ್ಟರೆ ಇದೇ ಮೊದಲ ಬಾರಿಗೆ ಬೇಸಾಯಕ್ಕೆ ಇಳಿದಿದ್ದೇವೆ. - ಅರುಣ್ ಡಿಸೋಜ ಕೃಷಿಕ