ರೋಣ: ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಅವುಗಳನ್ನು ಉತ್ತಮ ರೀತಿಯಲ್ಲಿ ಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಆಗ ಕಾಲ ಕಾಲಕ್ಕೆ ಮಳೆ ಆಗುತ್ತದೆ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ಪಟ್ಟಣದ ಆಯುರ್ವೇದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆಗಳ ಸಹಕಾರದಲ್ಲಿ ಭಾನುವಾರ ವನಮಹೋತ್ಸವ ಕಾರ್ಯಕ್ರಮ ನಿಮಿತ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ನಮ್ಮ ಭಾಗದಲ್ಲಿ ಮಳೆ ಕೊರತೆ ಕಂಡುಬರುತ್ತಿದೆ. ಎಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಸಿರು ಇರುತ್ತದೆಯೋ ಅಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ ಕೇವಲ ಸಸಿಗಳನ್ನು ನೆಡುವುದು ಮಾತ್ರವಲ್ಲ, ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಅವುಗಳನ್ನು ಸರಿಯಾದ ಕ್ರಮದಲ್ಲಿ ಬೆಳೆಸುವ ಪ್ರವೃತ್ತಿ ಹೊಂದಬೇಕು, ಇಲಾಖೆಯವರು ನೆಟ್ಟ ಗಿಡಗಳನ್ನು ಸಂರಕ್ಷಿಸುವಲ್ಲಿ ಕ್ರಮ ಕೈಗೊಳ್ಳಬೇಕು. ರೈತರು ರಸ್ತೆ ಬದಿಯಲ್ಲಿ ನೆಟ್ಟ ಗಿಡಗಳನ್ನು ಕಡಿಯುವುದಾಗಲಿ, ದಹಿಸುವುದಾಗಲಿ ಮಾಡಬಾರದು. ನಾವು ನೀವು ಉಸಿರಾಡುತ್ತಿರುವುದು ಉತ್ತಮ ಪರಿಸರದಿಂದ, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ ಆಗಿರುತ್ತದೆ ಎಂದರು. ಪುರಸಭೆ ಉಪಾಧ್ಯಕ್ಷ ಮಿಥುನ್ ಪಾಟೀಲ, ಐ.ಎಸ್. ಪಾಟೀಲ, ಗದಿಗೆಪ್ಪ ಕಿರೆಸುರ, ಯೂಸುಫ್ ಇಟಗಿ, ಅನ್ವರ್ ಕೋಲಾರ, ರಾಮಣ್ಣ ಪೂಜಾರ, ಶಫೀಕ ಮೂಗನೂರ, ನಾಗಪ್ಪ ದೇಶಣ್ಣವರ, ಸಂಗಪ್ಪ ಜಿಡ್ಡಿಬಾಗಿಲ, ಪಾಲ್ಗೊಂಡಿದ್ದರು.