ವಿಜಯಪುರ : ಬಸವನ ಬಾಗೇವಾಡಿ ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆ, ವಸತಿ ನಿಲಯಗಳಿಗೆ ಲೋಕಾಯುಕ್ತ ಬಿ.ಎಸ್.ಪಾಟೀಲ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಘಟಕ, ಚಿಕ್ಕ ಮಕ್ಕಳ ಐಸಿಯು, ಹೆರಿಗೆ ವಾರ್ಡ್, ಪ್ರಥಮ ಚಿಕಿತ್ಸಾ ಘಟಕ, ಔಷಧ ವಿತರಣಾ ವಿಭಾಗ, ರಕ್ತ ಸಂಗ್ರಹ ಕೇಂದ್ರ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಅಚ್ಚುಕಟ್ಟಾಗಿರುವ ವ್ಯವಸ್ಥೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಔಷಧ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ, ಔಷಧ ವಿತರಿಸಿದ ಕುರಿತು ದಾಖಲೆಗಳನ್ನು ಪರಿಶೀಲಿಸಿದರು. ಸರಿಯಾದ ರೀತಿಯಲ್ಲಿ ಔಷಧವನ್ನು ವಿತರಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಆಸ್ಪತ್ರೆಯಲ್ಲಿ ಉತ್ತಮ ಸೌಕರ್ಯವಿದೆ. ಇಲ್ಲಿ ನುರಿತ ವೈದ್ಯರಿದ್ದಾರೆ. ಅದರ ಅನುಕೂಲತೆ ಜನರಿಗೆ ಆಗಬೇಕು. ಆಸ್ಪತ್ರೆಗೆ ಬರುವ ಸಾರ್ವಜನಿಕರನ್ನು ಪ್ರೀತಿಯಿಂದ ಕಾಣಬೇಕು. ಆಸ್ಪತ್ರೆಯ ಒಳಗೆ ಮತ್ತು ಹೊರಗೆ ಸದಾಕಾಲ ಶುಚಿತ್ವ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.
ಬಳಿಕ ತೆಲಗಿ ರಸ್ತೆಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದರು. ವಸತಿ ನಿಲಯದ ಕಟ್ಟಡವು ಶಿಥಿಲಾವಸ್ಥೆಯಲ್ಲಿರುವುದನ್ನು ಮತ್ತು ವಿದ್ಯಾರ್ಥಿಗಳಿಗೆ ಸಾಕಷ್ಟು ಇಕ್ಕಟ್ಟಾಗುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹೊಸ ವಸತಿ ನಿಲಯದ ನಿರ್ಮಾಣಕ್ಕೆ ಒತ್ತು ಕೊಡಬೇಕು. ವಸತಿ ನಿಲಯದಲ್ಲಿ ವಿದ್ಯಾರ್ಥಿ ಸ್ನೇಹಿ ವಾತಾವರಣವಿರಬೇಕು. ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಕೊಡಿಸಬೇಕು. ಅವರಲ್ಲಿ ಶಿಸ್ತು ಬೆಳೆಸಲು ವಸತಿ ನಿಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಬಳಿಕ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಕೂಡ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ, ಅವರ ಯೋಗಕ್ಷೇಮ, ಅಭ್ಯಾಸದ ಬಗ್ಗೆ ವಿಚಾರಿಸಿದರು. ಊಟ ವಸತಿ ವಿದ್ಯಾಭ್ಯಾಸದ ಕುರಿತು ಮಾಹಿತಿ ಪಡೆದರು.
ದೇಶಾದ್ಯಂತ ಈಗ ಸ್ವಾತಂತ್ರೊೃೀತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮಗಳು ನಡೆಯುತ್ತಿವೆ. ಹೀಗಾಗಿ ವಸತಿ ನಿಲಯಗಳಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ರೂಪಿಸಿ ಮಕ್ಕಳಲ್ಲಿ ದೇಶಪ್ರೇಮ, ರಾಷ್ಟ್ರಭಕ್ತಿ ಭಾವನೆಯನ್ನು ಮೂಡಿಸಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಸಂವಿಧಾನದ ಬಗ್ಗೆ ತಿಳಿಯುವಂತೆ ಮತ್ತು ಸಂವಿಧಾನಕ್ಕೆ ಗೌರವ ನೀಡುವಂತೆ ಅವರಿಗೆ ತಿಳಿವಳಿಕೆ ನೀಡಬೇಕು. ಬೇರೆ ಬೇರೆ ಕಾನೂನುಗಳ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಬೇಕು. ನೀತಿಪಾಠ ಹೇಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಮ್ಮ ಮಕ್ಕಳಂತೆ ಕಾಣಬೇಕು ಎಂದು ವಸತಿ ನಿಲಯದ ಅಧಿಕಾರಿಗಳು, ನಿಲಯ ಪಾಲಕರು ಮತ್ತು ಇನ್ನಿತರ ಸಿಬ್ಬಂದಿಗೆ ಸಲಹೆ ನೀಡಿದರು.
ಲೋಕಾಯುಕ್ತ ಎಸ್ಪಿ ಅನಿತಾ ಹದ್ದನ್ನವರ, ಲೋಕಾಯುಕ್ತ ಡಿಎಸ್ಪಿ ಅರುಣ ನಾಯಕ್, ಲೋಕಾಯುಕ್ತ ಪೊಲೀಸ್ ಇನ್ಸ್ಸ್‌ಪೆಕ್ಟರ್ ಆನಂದ ಟಕ್ಕನ್ನವರ, ತಾಲೂಕು ವೈದ್ಯಾಧಿಕಾರಿ ಡಾ.ಶಶಿಧರ್ ಓತಗೇರಿ, ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಸಾಬಿರ್ ಪಟೇಲ್, ಡಾ.ನಾನಾಗೌಡ ಮೂಲಿಮನಿ, ಚಿಕ್ಕಮಕ್ಕಳ ತಜ್ಞ ಡಾ.ಸಚಿನ್ ಪೂಜಾರಿ, ಡಾ.ಪಟ್ಟಣಶೆಟ್ಟಿ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜಶೇಖರ ಚಿಂಚೊಳಿ, ಬಸವರಾಜ ಧನ್ಯಾಳ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಈರಪ್ಪ ಆಶಾಪುರ, ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.