ಚಿತ್ರದುರ್ಗ: ಕಾಣೆಯಾಗುತ್ತಿರುವ ಅವಿಭಕ್ತ ಕುಟುಂಬಗಳಿಂದಾಗಿ ಸಂಬಂಧಗಳು ನಶಿಸುತ್ತಿವೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ವಿಷಾದಿಸಿದರು.
ರಂಗಸೌರಭ ಕಲಾಸಂಘ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಒಂದು ದಿನದ ಸೈಕೋಡ್ರಾಮ ಕಾರ‌್ಯಾಗಾರ ಉದ್ಘಾಟಿಸಿ ಮಾತನಾಡಿ, ಅವಿಭಕ್ತ ಕುಟುಂಬಗಳ ಸಂಖ್ಯೆ ಕುಸಿತದಿಂದ, ಹಿರಿಯರನ್ನು ಗೌರವಿಸುವ ಸಂಸ್ಕೃತಿ ಕಡಿಮೆ ಆಗುತ್ತಿದೆ ಎಂದರು.
ಹಿಂದೆಲ್ಲ ಮನೆಯಲ್ಲಿ ಕಿರಿಯರಿಗೆ ಹಿರಿಯರು ಮಾರ್ಗದರ್ಶನ ನೀಡುತ್ತಿದ್ದರು. ರಂಗಕಲೆಗೆ ಪ್ರೋತ್ಸಾಹ ಬೇಕಿದೆ. ಶಿಕ್ಷಣದೊಂದಿಗೆ ವಿದ್ಯಾರ್ಥಿಗ ಳು ರಂಗಕಲೆಯ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಬೇಕು. ರಂಗಕಲೆ ವಿಭಿನ್ನವಾದುದು ಎಂದ ಅವರು, ನಾಟಕ ರಂಗಕ್ಕೆ ಪ್ರತಿಭಾವಂತ ರಂಗ ಕಲಾವಿದ ಅಶೋಕ್‌ಬಾದರ್ ದಿನ್ನಿ ಅವರ ಕೊಡುಗೆಯನ್ನು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಎಂ.ಆರ್.ಜಯಲಕ್ಷ್ಮೀ ಮಾತನಾಡಿ, ಶಿಕ್ಷಣದಲ್ಲಿ ಅಭಿನಯ ಕಲೆ ಬಹಳ ಮುಖ್ಯ. ತಂತ್ರಜ್ಞಾನ ಯುಗದಲ್ಲಿ ರಂಗ ಕಲೆ ನಶಿಸುತ್ತಿರುವುದರಿಂದ ಕಲಾವಿದರ ಬದುಕು ಕಷ್ಟವಾಗುತ್ತಿದೆ ಎಂದರು.
ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಕೆ.ಮೋಹನ್‌ಕುಮಾರ್, ಹೊಸದಿಲ್ಲಿ ರಾಷ್ಟ್ರೀಯ ನಾಟಕ ಶಾಲೆ ಪದವೀಧರೆ ಹೆಗ್ಗೋಡಿನ ಮೇದಿನಿ ಕೆಳಮನೆ, ಪ್ರಕಾಶ್ ಬಾದರದಿನ್ನಿ, ಉಪ ಪ್ರಾಚಾರ‌್ಯ ಎಚ್.ಎನ್. ಶಿವಕುಮಾರ್, ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಯೋಗ ಶಿಕ್ಷಕ ಮುರಳಿ ಇದ್ದರು.