ಶೃಂಗೇರಿ: ರಾಷ್ಟ್ರಪ್ರೇಮದ ಜತೆ ಮಾನವೀಯ ಗುಣವಿದ್ದಾಗ ಮಾತ್ರ ನಮ್ಮೊಳಗಿನ ಜ್ಞಾನದ ಪ್ರಖರತೆ ಜೀವಂತವಾಗಿರುತ್ತದೆ ಎಂಬ ಸಂದೇಶವನ್ನು ಕುವೆಂಪು ನೀಡಿದರು. ಧರ್ಮ ಎಂದರೆ ಸರ್ವಜನಾಂಗದ ಶಾಂತಿಯ ತೋಟ ಎಂಬುದಾಗಿ ಸಾರಿದ ಅಗ್ರಗಣ್ಯ ಎಂದು ಕೊಪ್ಪ ತಾಲೂಕು ಕಸಾಪ ಅಧ್ಯಕ್ಷೆ ಎಸ್.ಎನ್.ಚಂದ್ರಕಲಾ ತಿಳಿಸಿದರು.
ಜೆಸಿಬಿಎಂ ಕಾಲೇಜಿನಲ್ಲಿ ಶುಕ್ರವಾರ ಬೆಂಗಳೂರು ಸಾಹಿತ್ಯ ಅಕಾಡೆಮಿ, ಕಡೂರು ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನದಿಂದ ಕುವೆಂಪು ಸಾಹಿತ್ಯ ಅವಲೋಕನ ಕಾರ್ಯಕ್ರಮದಲ್ಲಿ ಕುವೆಂಪು ಅವರ ವಿಶ್ವಮಾನವ ಸಂದೇಶದ ಕುರಿತು ಮಾತನಾಡಿದರು.
ನಾವು ಅಲ್ಪಮಾನವರಲ್ಲ ಎಂಬ ಸಂದೇಶವನ್ನು ಪಂಚಮಂತ್ರ ಹಾಗೂ ಸಪ್ತಸೂತ್ರಗಳ ಮೂಲಕ ಜಗತ್ತಿಗೆ ನೀಡಿದ್ದಾರೆ. ಮನುಜಮತ ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಜೀವನದ ಅವಿಭಾಜ್ಯ ಅಂಗವಾಗಬೇಕು. ಸಂಘರ್ಷಗಳಲ್ಲಿ ಸಾಮರಸ್ಯದ ತುಡಿತವಿದ್ದಾಗ ಮಾತ್ರ ಸಮಾಜಕ್ಕೆ ಶ್ರೇಯಸ್ಸು. ಮಗು ವಿಶ್ವಮಾನವ. ಆದರೆ ಬೆಳೆಯುತ್ತ ಅಲ್ಪಮಾನವ ಆಗುತ್ತಾನೆ. ನಾವೆಲ್ಲ ಒಂದೇ ಎಂಬ ಪರಿಪೂರ್ಣ ದೃಷ್ಟಿ ನಮ್ಮಲ್ಲಿದ್ದಾಗ ಮಾತ್ರ ದೇಶ ಬೆಳೆಯಲು ಸಾಧ್ಯ. ಸುಜ್ಞಾನದ ಆಧಾರದ ಮೆಲೆ ವಿಜ್ಞಾನ ಬೆಳಗಬೇಕು ಎಂಬ ಸಂದೇಶ ನೀಡಿದ ಕುವೆಂಪು ಅವರ ಸಾಹಿತ್ಯ ಚಿರನೂತನ ಎಂದು ವಿಶ್ಲೇಷಿಸಿದರು.
ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ ಕುರಿತು ಸಾಹಿತಿ ಡಾ. ಆಗುಂಬೆ ಗಣೇಶ್ ಹೆಗಡೆ ಮಾತನಾಡಿ, ಸರ್ವರಿಗೂ ಸಮಬಾಳು-ಸಮಪಾಲು ಎಂಬ ದೃಷ್ಟಿತ್ವ ಹೊಂದಿದ ಕುವೆಂಪು ಅವರ ವೈಚಾರಿಕತೆ ಧರ್ಮಕ್ಕೆ ಪೂರಕ ಆಗಿದ್ದವು. ದೇವರು ಮತ್ತು ನಮ್ಮ ನಡುವೆ ಮತ್ತೊಬ್ಬ ವ್ಯಕ್ತಿಯ ಪ್ರವೇಶ ಸಲ್ಲದು ಎಂಬ ವಿಚಾರಧಾರೆ ಅವರಲ್ಲಿತ್ತು. ಪ್ರತ್ಯೇಕ ಧರ್ಮದ ನಿಲುವನ್ನು ಅವರು ಒಪ್ಪಿದವರಲ್ಲ.ಬಾಯಾರಿದವನಿಗೆ ನೀರು ಕೊಡುವ, ನೊಂದವರ ಕಣ್ಣೀರು ಒರೆಸುವುದು ನಿಜವಾದ ಧರ್ಮ. ಶಾಸ್ತ್ರಗಳು ನಮ್ಮೊಳಗಿನ ಎದೆಯ ಧ್ವನಿಯಾಗಬೇಕು ಎಂಬ ಸಂದೇಶಗಳನ್ನು ನೀಡಿದ ಅವರಲ್ಲಿ ಭಕ್ತಿಭಾವ ನಿರಂತರ ಅಡಕವಾಗಿತ್ತು ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಎಂ.ಸ್ವಾಮಿ, ಕಸಾಪ ಮಾಜಿ ಅಧ್ಯಕ್ಷೆ ಶೈಲಜಾ ರತ್ನಾಕರ್ ಹೆಗಡೆ, ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಕಾರ್ಯದರ್ಶಿ ಸುನೀತಾ ಇದ್ದರು.