ಸುತ್ತೂರು: ಇಲ್ಲಿನ ಜೆಎಸ್‌ಎಸ್ ಶಿಕ್ಷಕರ ತರಬೇತಿ ಸಂಸ್ಥೆಯ ಅಲ್ಲಮಪ್ರಭು ಸಭಾಂಗಣದಲ್ಲಿ ಭಾನುವಾರ ಗುರುಭ್ಯೋನಮಃ ಸಮಾರಂಭ ಆಯೋಜಿಸಲಾಗಿತ್ತು.
2009-11ನೇ ಸಾಲಿನಲ್ಲಿ ಶಿಕ್ಷಣ ಪೂರೈಸಿದ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪಾಲ್ಗೊಂಡಿದ್ದರು. ಜೆಎಸ್‌ಎಸ್ ಡಿ.ಇಡಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ದೊಡ್ಡಸಿದ್ದಯ್ಯ, ರಾಮಣ್ಣ ಮತ್ತು ದಾಕ್ಷಾಯಿಣಿ ಬಸವರಾಜು ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಈ ಕಾಲೇಜಿಗೆ 65 ವರ್ಷಗಳ ಇತಿಹಾಸವಿದ್ದು, 1960ರಲ್ಲಿ ಡಾ. ಸರ್ವಪಲ್ಲಿ ರಾಧಕೃಷ್ಣನ್ ಅವರು ಭೇಟಿ ನೀಡಿದ್ದರು. ಆ ಬಳಿಕ 2009ರಲ್ಲಿ ನಡೆದ ಕಾಲೇಜಿನ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಭಾಗವಹಿಸಿದ್ದರು ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸ್ಮರಿಸಿದರು.
ಜೀವನದಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳುವುದರ ಜತೆಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಇಂತಹ ಕಾರ್ಯಗಳಿಗೆ ಸಂಸ್ಥೆ ಕೈಜೋಡಿಸಲಿದೆ ಎಂದು ಹೇಳಿದರು.
ಹಿರಿಯ ವಿದ್ಯಾರ್ಥಿಗಳು ಪ್ರಾಂಭಿಸಿರುವ ಅಭ್ಯುದಯ ಫೌಂಡೇಷನ್‌ಗೆ ಸಕಲೇಶಪುರದ ಕಿತ್ತಲೆ ಮನೆ ಎಸ್ಟೇಟ್ ಮಾಲೀಕ ರೋಹಿತ್ ದೇಣಿಗೆ ನೀಡಿದರು. ನಿವೃತ್ತ ಪ್ರಾಂಶುಪಾಲ ಜಿ.ಎಂ.ಬಸವಣ್ಣ, ಹಿರಿಯ ಪ್ರಶಿಕ್ಷಣಾರ್ಥಿಗಳಾದ ಮಹದೇವಮ್ಮ, ತಸ್ಲೀಮ್, ಆಶಾರಾಣಿ, ಸೌಮ್ಯಾ ಇತರರಿದ್ದರು.