ಲೋಕಾಪುರ: ಯುವ ಜನತೆಯಲ್ಲಿ ಶಿಸ್ತು, ನಾಯಕತ್ವ ಹಾಗೂ ಸಂಘಟನೆ ಮುಖ್ಯ ಓದಿನೊಂದಿಗೆ ಕ್ರೀಡೆಯಲ್ಲೂ ತೊಡಗಿಸಿಕೊಳ್ಳುವುದರಿಂದ ಇವುಗಳು ಬೆಳೆಯಲು ಸಾಧ್ಯ. ಶಿಕ್ಷಣದ ಜೊತೆ ಕ್ರೀಡೆಗೂ ಒತ್ತು ನೀಡಿದಾಗ ಆರೋಗ್ಯವಂತರಾಗಿ ಬದುಕಬಹುದು ಎಂದು ದೈಹಿಕ ಶಿಕ್ಷಣ ಪರೀವಿಕ್ಷಕ ಎಸ್.ಎಂ.ಕುರಣಿ ಕರೆ ನೀಡಿದರು.
ಪಟ್ಟಣದಲ್ಲಿ ಜಿಪಂ ಬಾಗಲಕೋಟೆ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುಧೋಳ, ಸಮೂಹ ಸಂಪನ್ಮೂಲ ಕೇಂದ್ರ ಲೋಕಾಪುರ, ಲೋಕೇಶ್ವರ ಶಿಕ್ಷಣ ಸಮಿತಿ ಹಿರಿಯ ಪ್ರಾಥಮಿಕ ಶಾಲೆ ಇವರ ಆಶ್ರಯದಲ್ಲಿ ಲೋಕಾಪುರ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ದೈಹಿಕವಾಗಿ ಶ್ರಮಿಸಿದಾಗ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಈ ದಿಶೆಯಲ್ಲಿ ಕ್ರೀಡಾಭಿಮಾನ ಬೆಳೆಸಿಕೊಂಡು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೆ ಮುಂದಾಗುವಂತೆ ಹೇಳಿದರು.
ನಿವೃತ್ತ ಪ್ರಾಚಾರ್ಯ ಹಾಗೂ ಲೋಕೇಶ್ವರ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಬಿ.ಕೃಷ್ಣಗೌಡರ ಮಾತನಾಡಿ, ಕ್ರೀಡಾಪಟುಗಳಿಗೆ ಸರ್ಕಾರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದೆ, ಹಾಗಾಗಿ, ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿವೆ. ಇಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಬೇತಿ, ಮಾರ್ಗದರ್ಶನ ನೀಡಿ ತಾಲೂಕೂ, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲೂ ವಿಜೇತರಾಗಲು ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಮುಲ್ಲಾ ಕ್ರೀಡಾಪಟುಗಳಿಗೆ ಹಸ್ತಲಾಘವ ಮಾಡಿ ಶುಭಾಶಯ ಕೋರಿದರು. ಈ ವೇಳೆ ನಿವೃತ್ತ ಪ್ರಾಚಾರ್ಯ ಡಿ.ಎಂ.ತುಬಾಕಿ, ಗಿರೀಶ ಕೊಪ್ಪದ, ಇಸಿಒ ವೈ.ಎಂ.ಪಮ್ಮಾರ, ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಟಿ.ಬಿರಾದಾರ ಪಾಟೀಲ, ಸಿಆರ್‌ಪಿ ಗಂಗಾಧರ ಗಾಣಗೇರ, ಪ್ರಾಚಾರ್ಯ ಎಸ್.ಎಂ.ಜೈನಾಪುರ, ಎಸ್.ಎಂ.ಹಡಪದ, ಮಂಜುನಾಥ ಪಾಟೀಲ, ಕಸ್ಟರ್ ಮಟ್ಟದ 16 ಶಾಲೆಗಳ ಮುಖ್ಯೋಪಾಧ್ಯಾಯರು, ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರು, ಕ್ರೀಡಾಪಟುಗಳು ಇದ್ದರು.