ಕೊಲ್ಹಾರ: ವಿದ್ಯಾರ್ಥಿಗಳ ಜೀವನದಲ್ಲಿ ಅವಕಾಶಗಳು ಪದೇಪದೇ ಬರುವುದಿಲ್ಲ ಸಿಕ್ಕ ಅವಕಾಶ, ದೊರೆತ ಸ್ಫೂರ್ತಿಯನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಂಡು ಸಮಾಜದಲ್ಲಿ ಪ್ರತಿಭಾನ್ವಿತ ಪ್ರತಿಭೆಗಳಾಗಿ ಬದುಕುವುದನ್ನು ನಾವು ಎಂದೂ ಕಳೆದುಕೊಳ್ಳಬಾರದು ಎಂದು ನಿವೃತ್ತ ಮುಖ್ಯಶಿಕ್ಷಕ ಬಿ.ಎಸ್. ಹಂಗರಗಿ ಹೇಳಿದರು.
ಪಟ್ಟಣದ ಸಮೀಪದಲ್ಲಿರುವ ಗಡ್ಡಿ ರಾಚೋಟೇಶ್ವರ ದೇವಸ್ಥಾನದಲ್ಲಿ ತಾಲೂಕಾ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುರಸ್ಕಾರ ಎಂಬುದು ಮನುಷ್ಯನ ಜೀವನವನ್ನು ಮಾರ್ಪಾಡು ಮಾಡುತ್ತದೆ. ಪ್ರತಿಯೊಬ್ಬರು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅದರಂತೆ ಮಾನವೀಯತೆ ಸಂಸ್ಕಾರವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದರು.
ವೈದ್ಯ ಅರುಣ ಗಾಣಿಗೇರ ಮಾತನಾಡಿ, ವಿದ್ಯಾರ್ಥಿಗಳು ತಂದೆ ತಾಯಿಯನ್ನು ಪ್ರೀತಿಸಿ ಗೌರವಿಸುವುದರ ಜತೆಗೆ ಜ್ಞಾನಾರ್ಜನೆಯ ಬುತ್ತಿಯನ್ನು ಉಣಬಡಿಸಿದ ಶಿಕ್ಷಕರ ಮಾರ್ಗದರ್ಶನದಲ್ಲಿ ಶ್ರದ್ಧೆ, ಛಲ, ಆಸಕ್ತಿಯೊಂದಿಗೆ ನಿಖರ ಗುರಿಯತ್ತ ತಮ್ಮ ಮನಸ್ಸನ್ನು ಕೇಂದ್ರಿಕರಿಸಿಕೊಂಡು ಕಷ್ಟಪಟ್ಟು ಓದಿದರೆ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಗುಣಮಟ್ಟದ ಆಹಾರ ಸೇವಿಸಿ ಆರೋಗ್ಯವನ್ನು ಸದೃಢಗೊಳಿಸಿಕೊಳ್ಳುವುದು ಇಂದಿನ ದಿನಮಾನಗಳಲ್ಲಿ ಅವಶ್ಯವಾಗಿದೆ ಎಂದರು.
ತಾಲೂಕಿನಿಂದ ಗಾಣಿಗ ಸಮಾಜದ ಒಟ್ಟು 11 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು ಸಾನ್ನಿಧ್ಯ ವಹಿಸಿದ್ದರು. ನೌಕರರ ಸಂಘದ ತಾಲೂಕಾಧ್ಯಕ್ಷ ಪುಂಡಲೀಕ ಬಸರಕೋಡ ಅಧ್ಯಕ್ಷತೆ ವಹಿಸಿದ್ದರು.
ಎಸ್.ಎನ್. ಗಿಡ್ಡಪ್ಪಗೋಳ, ಅಪ್ಪನಗೌಡ ಬಿರಾದಾರ, ಕಲ್ಮೇಶ ಪರಗೊಂಡ, ಬಿ.ಎನ್. ತುಪ್ಪದ, ಎಂ.ಎಸ್. ದಳವಾಯಿ, ಕೆ.ಎಸ್. ಬಾಲಗೋಂಡ, ವಿ.ಆರ್. ಐಹೊಳ್ಳಿ, ಬಿ.ಎಸ್. ಬಾಗಲಕೋಟ, ಟಿ.ಪಿ. ದಳವಾಯಿ, ಮಂಜುನಾಥ ಮಟ್ಟಹಾಳ, ಎಸ್.ಎಂ. ಹಂಡಿ, ಅಶೋಕ ಗಿಡ್ಡಪ್ಪಗೋಳ ಇತರರಿದ್ದರು.