ಜಿಲ್ಲೆ

ಕಬ್ಬನ್‌ಪಾರ್ಕ್ ‘ವಾರಾಂತ್ಯ ಪ್ರವಾಸ’ಕ್ಕೆ ಜು. 27ರಂದು ಚಾಲನೆ

ಪಂಕಜ ಕೆ.ಎಂ.

ಬೆಂಗಳೂರು: ಕಬ್ಬನ್‌ಪಾರ್ಕ್‌ನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸುತ್ತಿರುವ ‘ವಾರಾಂತ್ಯ ಪ್ರವಾಸ’ಕ್ಕೆ ಭಾನುವಾರ (ಜು. 27) ದಿಂದ ಆರಂಭವಾಗಲಿದ್ದು, ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಬಿಎಸ್‌ಎನ್‌ಎಲ್ ಕಚೇರಿ ಬಳಿಯ ಕಬ್ಬನ್‌ಪಾರ್ಕ್‌ನ ಪ್ರವೇಶ ದ್ವಾರದಲ್ಲಿ ಬೆಳಗ್ಗೆ 7.30ಕ್ಕೆ ಚಾಲನೆ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಶಾಸಕರಾದ ಎನ್.ಎ.ಹ್ಯಾರಿಸ್, ರಿಜ್ವಾನ್ ಅರ್ಷದ್, ಸಂಸದ ಪಿ.ಸಿ.ಮೋಹನ್, ತೋಟಗಾರಿಕೆ ಇಲಾಖೆ ಮುಖ್ಯ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ಮತ್ತಿತರರು ಭಾಗವಹಿಸುವರು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಜಿ.ಕುಸುಮಾ ತಿಳಿಸಿದರು.

ವಾರಾಂತ್ಯ ಪ್ರವಾಸಕ್ಕೆ 100ಕ್ಕೂ ಅಧಿಕ ಮಂದಿ ಮುಂಗಡವಾಗಿ ಹೆಸರು ನೋಂದಾಯಿಸಿದ್ದಾರೆ. ಇವರನ್ನು ಮೂರು ತಂಡಗಳಲ್ಲಿ ಪ್ರವಾಸಕ್ಕೆ ಕರೆದೊಯ್ಯಲಾಗುವುದು. ಎರಡು ತಂಡಗಳು 7.30ಕ್ಕೆ ಹೊರಟರೆ, ಮತ್ತೊಂದು ತಂಡ ಬೆಳಗ್ಗೆ 8 ಗಂಟೆಗೆ ತೆರಳಲಿದೆ. ಪ್ರವಾಸವು ಒಂದೂವರೆ ಗಂಟೆಗಳ ಕಾಲ ಇರುತ್ತದೆ. ಪ್ರತಿ ತಂಡದಲ್ಲೂ ಒಬ್ಬ ಪರಿಸರ ತಜ್ಞರನ್ನು ಮಾರ್ಗದರ್ಶಕರನ್ನಾಗಿ ನಿಯೋಜಿಸಲಾಗಿದ್ದು, ಇವರು ಕಬ್ಬನ್‌ಪಾರ್ಕ್‌ನ ಇತಿಹಾಸ, ಮರ-ಗಿಡಗಳು, ಪಕ್ಷಿಗಳು, ಪ್ರತಿಮೆಗಳು, ಉದ್ಯಾನಕ್ಕೆ ಭೇಟಿ ನೀಡಿದ್ದ ಗಣ್ಯರ ಕುರಿತು ಮಾಹಿತಿ ನೀಡಲಿದ್ದಾರೆ. ವಾರಾಂತ್ಯ ಪ್ರವಾಸವು ಪ್ರತಿ ವಾರವೂ ನಡೆಯಲಿದೆ ಎಂದು ಹೇಳಿದರು.