ಜಿಲ್ಲೆ

ಸಿ.ಟಿ.ಶಂಕರ್‌ಗೆ ಬೆಳ್ಳಿ ಗದೆ, ಕಿರೀಟ ಉಡುಗೊರೆ

ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ಈಡಿಗರದೊಡ್ಡಿಯಲ್ಲಿ (ಕೆಸ್ತೂರು ದುಂಡನಹಳ್ಳಿ ಮಧ್ಯೆ) ಜ.15ರಂದು ಬೆಳಗ್ಗೆ 10 ಗಂಟೆಗೆ ತಿಮ್ಮದಾಸ್ ಗ್ರೂಪ್ಸ್ ಮಾಲೀಕ ಹಾಗೂ ಸಮಾಜ ಸೇವಕ ಸಿ.ಟಿ.ಶಂಕರ್ ಹುಟ್ಟುಹಬ್ಬದ ಅಂಗವಾಗಿ ಮುಗಿಲು ಸೇವಾ ಟ್ರಸ್ಟ್ ಹಾಗೂ ಸಿ.ಟಿ.ಶಂಕರ್ ಅಭಿಮಾನಿಗಳ ಬಳಗದ ವತಿಯಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಕದಲೂರು ಲೋಕೇಶ್ ತಿಳಿಸಿದರು.

ಈಡಿಗರ ದೊಡ್ಡಿ ಗ್ರಾಮದಲ್ಲಿ ಸಿದ್ದವಾಗುತ್ತಿರುವ ಕಾರ್ಯಕ್ರಮದ ಬೃಹತ್ ವೇದಿಕೆಯ ಅಂತಿಮ ಸಿದ್ಧತೆ ಪರಿಶೀಲಿಸಿ ಸೋಮವಾರ ಮಾತನಾಡಿದರು. ತಿಮ್ಮದಾಸ್ ಗ್ರೂಪ್ಸ್ ಮಾಲೀಕ ಸಿ.ಟಿ.ಶಂಕರ್ ಕೋವಿಡ್ ಸಂದರ್ಭದಲ್ಲಿ ತಾಲೂಕಿನ ರೋಗಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಉಚಿತವಾಗಿ ಆ್ಯಂಬುಲೆನ್ಸ್ ವ್ಯವಸ್ಥೆ, ನೂರಾರು ಹಳ್ಳಿಗಳಿಗೆ ರೋಗ ಹರಡದಂತೆ ಸ್ಯಾನಿಟೈಜರ್ ಸಿಂಪಡಣೆ ಮಾಡಿಸಿದ್ದರು. ಸೋಮನಹಳ್ಳಿ ಗ್ರಾಪಂ ವ್ಯಾಪ್ತಿಯ ಹಲವಾರು ಹಳ್ಳಿಗಳಿಗೆ ಲಕ್ಷಾಂತರ ರೂ. ಸ್ವಂತ ಹಣದಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸುವ ಮೂಲಕ ಗ್ರಾಮಸ್ಥರಿಗೆ ಬೆಳಕಿನ ಭಾಗ್ಯ ಕಲ್ಪಿಸಿದ್ದರು. ಮಲ್ಲನಕುಪ್ಪೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ದೂರದ ಊರುಗಳಿಂದ ಬರಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಸ್ವಂತ ಹಣದಲ್ಲಿ ವಾಹನ ನೀಡುವ ಮೂಲಕ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಸಕಾಲಕ್ಕೆ ಶಾಲೆಗೆ ಬರಲು ಅನುಕೂಲ ಕಲ್ಪಿಸಿದ್ದಾರೆ. ಜತೆಗೆ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ ಎಂದರು.

ಆತಗೂರು ಹೋಬಳಿಯ ಹಲವಾರು ದೇವಾಲಯಗಳ ಜೀರ್ಣೋದ್ಧಾರಕ್ಕೆ ಧನ ಸಹಾಯ ಮಾಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಜನರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುವ ಮೂಲಕ ನೊಂದವರ ಬಾಳಿಗೆ ಆಸರೆಯಾಗಿದ್ದಾರೆ. ಸೋಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ, ಗ್ರಾಪಂ ಅಧ್ಯಕ್ಷರಾಗಿ, ಹಾಲಿ ಸದಸ್ಯರಾಗಿ ಸರ್ಕಾರದಿಂದ ಸಿಗುವ ಹಲವಾರು ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಜನರ ಮಧ್ಯೆ ಸದಾ ಬೆರೆತು ಸಾಮಾನ್ಯವಾಗಿ ವ್ಯಕ್ತಿಯಂತೆ ಕಷ್ಟ, ಸುಖಗಳಿಗೆ ಸ್ಪಂದಿಸಿದ್ದಾರೆ. ಇವರ ಹೃದಯ ಶ್ರೀಮಂತಿಕೆಯನ್ನು ಜನರು ಸದಾ ಸ್ಮರಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ತಿಮ್ಮದಾಸ್ ಗ್ರೂಪ್ ಮಾಲೀಕರಾಗಿ ನೂರಾರು ಮಂದಿಗೆ ಉದ್ಯೋಗ ನೀಡುವ ಜತೆಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಮಾಜಮುಖಿಯಾಗಿ ನಿಸ್ವಾರ್ಥವಾಗಿ ತೊಡಗಿಸಿಕೊಂಡಿರುವ ಇವರ ಹೃದಯ ವೈಶಾಲ್ಯತೆ ಹಾಗೂ ಸಾಧನೆ ಮೆಚ್ಚಿ ಮುಗಿಲು ಸೇವಾ ಟ್ರಸ್ಟ್ ಹಾಗೂ ಸಿ.ಟಿ.ಶಂಕರ್ ಅಭಿಮಾನಿಗಳ ಬಳಗದ ವತಿಯಿಂದ ಸಿ.ಟಿ.ಶಂಕರ್ ಅವರಿಗೆ ಬೆಳ್ಳಿ ಗದೆ, ಕಿರೀಟ ನೀಡುವ ಮೂಲಕ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಗುತ್ತಿದೆ ಎಂದರು.

ಲೋಕೇಶ್, ರವಿ ಹೊಸಹಳ್ಳಿ, ನಂದೀಶ್ ಹೆಮ್ಮನಹಳ್ಳಿ, ಚೌಡಯ್ಯ ತೂಬಿನಕೆರೆ, ಮಧು ಮಲ್ಲನಕುಪ್ಪೆ, ಗಿರಿ ಕೆಸ್ತೂರು ಇತರರು ಇದ್ದರು.