ಜಿಲ್ಲೆ

ಲಕ್ಯಾ ಭಾಗದ ನೀರಾವರಿ ಯೋಜನೆಗೆ 28 ಕೋಟಿ ರೂ.

Chikkamagaluru

ಚಿಕ್ಕಮಗಳೂರು: ಲಕ್ಯಾ ಭಾಗದಲ್ಲಿ ನೀರಾವರಿ ಯೋಜನೆಗೆ 28 ಕೋಟಿ ರೂ. ಮಂಜೂರಾಗಿದ್ದು, ಡಿಸೆಂಬರ್ ಅಂತ್ಯದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

ತಾಲೂಕಿನ ವಿವಿಧೆಡೆ 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿರುವ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಭೈರಾಪುರ ಪಿಕಪ್​ನಿಂದ ಲಕ್ಯಾ ಮಾದರಸನ ಕೆರೆ ಹಾಗೂ ದಾಸರಹಳ್ಳಿ ಕೆರೆ ಸೇರಿ ಚೆಕ್​ಡ್ಯಾಮ್ಳಿಗೆ ನೀರು ತುಂಬಿಸುವ ಯೋಜನೆ ಕುರಿತು ರೈತರ ಜತೆ ಸಮಾಲೋಚನೆ ನಡೆಸಲಾಗುತ್ತಿದೆ. ಜನವರಿ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದರು.

3 ಕೋಟಿ ರೂ.ವೆಚ್ಚದಲ್ಲಿ ಉದ್ದೇಬೋರನಹಳ್ಳಿ-ಸಿರಬಡಿಗೆ ರಸ್ತೆ, ಈಶ್ವರಹಳ್ಳಿ ರಸ್ತೆ, ಬಿಸಿಎಂ ಹಾಸ್ಟೆಲ್ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಲಕ್ಯಾ, ಕಳಸಾಪುರ ರಸ್ತೆಗೆ 4 ಕೋಟಿ ರೂ, ಉದ್ದೇಬೋರನಹಳ್ಳಿ ರಸ್ತೆಗೆ 7 ಕೋಟಿ ರೂ.ಮಂಜೂರಾಗಿದೆ. ನಗರದ ತಾಲೂಕು ಕಚೇರಿ ಆವರಣದಲ್ಲಿ ಗೋಪುರ, ಕಲ್ಲು ಜೋಡಣೆ, ಗರ್ಭಗುಡಿ ಸೇರಿ ಗಣಪತಿ ದೇವಾಲಯದ ಕಾಮಗಾರಿ ಪೂರ್ಣಗೊಳಿಸಲು 15 ಲಕ್ಷ ರೂ. ಅನುದಾನ ನೀಡಲಾಗಿದೆ. ಕ್ಷೇತ್ರದಲ್ಲಿ ಟೀಕೆ ಮಾಡುವವರಿಗೆ ಅಭಿವೃದ್ಧಿ ಮೂಲಕ ಉತ್ತರ ನೀಡಲಾಗುತ್ತಿದೆ ಎಂದರು.