DR.G.PARAMESHWAR 
ಜಿಲ್ಲೆ

ಸಿ.ಟಿ. ರವಿ ಪ್ರಕರಣ ಸಿಐಡಿಗೆ ಹಸ್ತಾಂತರ

ಮರಿದೇವ ಹೂಗಾರ

ಹುಬ್ಬಳ್ಳಿ: ಎಂಎಲ್‌ಸಿ ಸಿ.ಟಿ. ರವಿ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಇದರ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡುವುದಿಲ್ಲ. ತನಿಖೆ ನಡೆಯುವಾಗ ಹೇಳಿಕೆ ನೀಡುವುದು ಸರಿಯಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ಪ್ರಕರಣದ ವಿಚಾರವಾಗಿ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಕೆಲಸ ತಾವು ಮಾಡುತ್ತಿದ್ದಾರೆ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲಿದ್ದಾರೆ. ಅಲ್ಲಿಯ ಸಾಧಕ-ಬಾಧಕ ನೋಡಿಕೊಂಡು ಹೇಳಿಕೆ ಕೊಟ್ಟಿರಬಹುದು. ಕಾನೂನು ಪ್ರಕ್ರಿಯೆ ನಡೆಯುವಾಗ ಕೆಲವು ವಿಳಂಬವಾಗಬಹುದು. ಆದರೆ ತನಿಖೆ ಸರಿಯಾಗಿ ಮಾಡಬೇಕಾಗುತ್ತದೆ. ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಲಾಗುವುದು ಎಂದರು.

ಸಿ.ಟಿ. ರವಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆ ರೀತಿ ಹೇಳಿಲ್ಲ ಎನ್ನುತ್ತಿದ್ದಾರೆ. ಹೆಬ್ಬಾಳ್ಕರ್ ಪಕ್ಕದಲ್ಲಿದ್ದವರು ಆ ಮಾತು ಆಡಿದ್ದಾರೆ ಎನ್ನುತ್ತಾರೆ. ಈ ಎಲ್ಲ ವಿಚಾರಗಳ ಬಗ್ಗೆ ತನಿಖೆ ಮಾಡಲು ಸಿಐಡಿಗೆ ಹಸ್ತಾಂತರಿಸಲಾಗಿದೆ. ಪೊಲೀಸ್ ಇಲಾಖೆ ಜವಾಬ್ದಾರಿಯುತ ಇಲಾಖೆ. ಸಿಎಂ ಅಥವಾ ಗೃಹ ಸಚಿವರ ಆದೇಶವನ್ನು ಮಾತ್ರ ಪೊಲೀಸರು ಪಾಲನೆ ಮಾಡತ್ತಾರೆ. ಬೇರೆ ಯಾರೇ ಆದೇಶ ಮಾಡಿದರೂ ಅದನ್ನು ಪಾಲನೆ ಮಾಡುವುದಿಲ್ಲ. ಅವರಿವರು ಆರೋಪ ಮಾಡುತ್ತಾರೆಂದು ನಾವು ಇಲಾಖೆ ನಡೆಸುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದರು.

ತಿರುಗೇಟು: ಪ್ರಲ್ಹಾದ ಜೋಶಿ ಅವರು ಅಸಮರ್ಥ ಕೇಂದ್ರ ಸಚಿವ ಎಂದರೆ ಒಪ್ಪಿಕೊಳ್ಳುತ್ತಾರಾ? ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ. ಹಾಗಾಗಿ ಅವರು ಹಾಗೆ ಹೇಳಿದ್ದಾರೆ ಎಂದು ಡಾ.ಜಿ. ಪರಮೇಶ್ವರ ತಿರುಗೇಟು ನೀಡಿದರು.