ಜಿಲ್ಲೆ

ಎಪಿಎಲ್ ಇದ್ದರೂ ಹಣ ಕೊಟ್ರೆ ಮಾತ್ರ ಸಿ.ಟಿ/ಎಂಆರ್‌ಐ ಸೇವೆ

ಪಂಕಜ ಕೆ.ಎಂ.

ಬೆಂಗಳೂರು: ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತ ರೋಗ ಪತ್ತೆ ಸೇವೆ ಪಡೆಯುತ್ತಿದ್ದ ಎಪಿಎಲ್ ಕಾರ್ಡ್‌ದಾರರಿಗೆ ಶೇ.70 ಶುಲ್ಕ ಪಾವತಿ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಲ್ಲಿ ಈವರೆಗೆ ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಸಿಟಿ/ ಎಂಆರ್‌ಐ ಸ್ಕಾೃನ್ ನಡೆಸಲಾಗುತ್ತಿತ್ತು. ಆದರೆ ಜುಲೈನಲ್ಲಿ ಶುಲ್ಕ ಪಾವತಿ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಅದರಂತೆ ಸೆ. 23 ರಿಂದಲೇ ಎಪಿಎಲ್ ಕಾರ್ಡ್‌ದಾರರಿಗೆ ಶುಲ್ಕ ಪಾವತಿ ಮಾಡಿ ಸೇವೆ ಪಡೆಯುವುದನ್ನು ಕಡ್ಡಾಯಗೊಳಿಸಿ ಜಿಲ್ಲಾ ಆಸ್ಪತ್ರೆಗಳಿಗೆ ಸುತ್ತೋಲೆ ರವಾನಿಸಲಾಗಿದೆ. ಜತೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಸಾಸ್ಟ್) ಐಟಿ ವಿಭಾಗದ ಮೂಲಕ ಲಾಜಿಸ್ಟಿಕ್ ಅನುಷ್ಠಾನ ಮಾಡುವುದನ್ನೂ ಕಡ್ಡಾಯಗೊಳಿಸುವಂತೆ ಸೂಚಿಸಲಾಗಿದೆ.

ಸೆ.18ರಂದೇ ಈ ಅದೇಶ ಹೊರಡಿಸಲಾಗಿದ್ದು, ಇದರೊಂದಿಗೆ ಸೆ.23ರಿಂದ ಕಡ್ಡಾಯವಾಗಿ ಎಪಿಎಲ್ ಕಾರ್ಡ್‌ದಾರರು ಶೇ. 70/30ರ ಪ್ರಕಾರ ಆನ್‌ಲೈನ್ ಹಾಗೂ ಆ್ಲೈನ್ ಪಾವತಿ ಮೂಲಕ ಸಿಟಿ/ಎಂಆರ್‌ಐ ಸೇವೆ ಪಡೆದುಕೊಳ್ಳಬೇಕಾಗಿದೆ.

ಯಾವ್ಯಾವ ಆಸ್ಪತ್ರೆಗಳು:

ಚಿಕ್ಕಮಗಳೂರು, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ವಿಜಯಪುರ, ಗದಗ, ಹಾವೇರಿ, ಬಾಗಲಕೋಟೆ, ಉಡುಪಿ, ಕಾರವಾರ, ಕೋಲಾರ, ತುಮಕೂರು, ಕೊಡಗು, ಯಾದಗಿರಿ, ಧಾರವಾಡ ಜಿಲ್ಲಾ ಆಸ್ಪತ್ರೆಗಳು ಹಾಗೂ ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಟಿ ಮತ್ತು ಎಂಆರ್‌ಐ ಸ್ಕಾೃನ್ ಸೌಲಭ್ಯಕ್ಕೆ ಎಪಿಎಲ್ ಕಾರ್ಡ್‌ದಾರರು ಶುಲ್ಕ ಭರಿಸಿ ಸೇವೆ ಪಡೆಯಬೇಕಾಗಿದೆ.