ಬೆಂಗಳೂರು: ಆರೋಗ್ಯ ಕ್ಷೇತ್ರದ ಅಭಿವೃದ್ಧಿಯನ್ನು ಆದ್ಯತೆಯಾಗಿಟ್ಟುಕೊಂಡು ಕಾಪೋರೇಟ್ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಸಿಎಸ್‌ಆರ್ ನಿಧಿ ಒದಗಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದರು.
ಸಿ-ಕ್ಯಾಂಪ್ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಪೋರೇಟ್ ಕಂಪನಿಗಳ ಫೌಂಡೆಶನ್ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಿಎಸ್‌ಆರ್ ಯೋಜನೆಗಳ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಸುಧಾರಣೆ ತರಬಹುದಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಕಾಪೋರೇಟ್ ಕಂಪನಿಗಳು ಆರ್ಥಿಕ ಬಲ ನೀಡಬೇಕು ಎಂದರು.
ಜನಸಾಮಾನ್ಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದ್ದು, ವಿಶೇಷವಾಗಿ ಅಸಾಂಕ್ರಾಮಿಕ ಕಾಯಿಲೆಗಳನ್ನು ಆರಂಭದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಮತ್ತು ಔಷಧ ನೀಡುವ ಮೂಲಕ ಜನರ ಆರೋಗ್ಯ ರಕ್ಷಣೆಗೆ ಕ್ರಮ ವಹಿಸಿದೆ. ಇದಕ್ಕಾಗಿ ‘ಗೃಹ ಆರೋಗ್ಯ’ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಸಿದೆ. ಈ ಯೋಜನೆಯಡಿ ಆರೋಗ್ಯ ಕಾರ್ಯಕರ್ತರ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಯಲ್ಲಿ ಜನರ ಆರೋಗ್ಯ ತಪಾಸಣೆ ಹಾಗೂ ಪರೀಕ್ಷೆ ನಡೆಸಿ ಅಗತ್ಯ ಔಷಧಗಳ ವಿತರಣೆ ಮಾಡಲಾಗುವುದು.ಈ ಯೋಜನೆಗೆ ಕಾೆರೇಟ್ ಕಂಪನಿಗಳು ಸಿಎಸ್‌ಆರ್ ನಿಧಿ ವಿನಿಯೋಗಿಸಬಹುದಾಗಿದೆ ಎಂದು ಸಚಿವರು ಹೇಳಿದರು.
ಕರ್ನಾಟಕದ ಮೂರ‌್ನಾಲ್ಕು ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ಹಾವಳಿ ಹೆಚ್ಚಿದ್ದು, ಇದರ ತಡೆಗೆ ತುರ್ತಾಗಿ ಲಸಿಕೆ ತಯಾರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಶೋಧನಾ ಕಾರ್ಯಗಳಿಗೆ ಸಿಎಸ್‌ಆರ್ ನಿಧಿ ಬಹಳ ಅನುಕೂಲವಾಗಲಿದೆ ಎಂದ ಸಚಿವರು ಆರೋಗ್ಯ ಇಲಾಖೆಗೆ ಅಭಿವೃದ್ಧಿಗೆ ಅಗತ್ಯ ಇರುವ ಮೂಲಸೌಕರ್ಯಗಳನ್ನು ಒದಗಿಸುವ ಕುರಿತು ವಿವರಿಸಿದರು.
ಸಭೆಯಲ್ಲಿ ಯುನಿಸೆಫ್, ಇನ್ಫೋಸಿಸ್ ಫೌಂಡೇಶನ್, ಬಯೋಕಾನ್ ಫೌಂಡೇಶನ್, ಬಾಷ್ ಗ್ಲೋಬಲ್ ಸಾಫ್ಟ್‌ವೇರ್ ಟೆಕ್ನಾಲಜೀಸ್, ಅಸ್ಟ್ರಜೆನಕಾ, ಯುಸೈಡ್, ಜಿ. ಇ. ಹೆಲ್ತ್ ಕೇರ್, ಎಚ್‌ಸಿಎಲ್ ಫೌಂಡೇಶನ್, ಇಂಟೆಲ್ ಕಾರ್ಪೊರೇಶನ್, ಮೈಕ್ರೋ ಲ್ಯಾಬ್, ಅಂಥೆಮ್ ಬಯೋಸೈನ್ಸ್, ಸತ್ವ ಕನ್ಸಲಿಂಗ್, ವೋಲ್ಲೋ ಗ್ರೂಪ್ ಇಂಡಿಯಾ, ಆಶ್ರಯ ಹಸ್ತ ಟ್ರಸ್ಟ್, ಜೆ.ಎಸ್. ಡಬ್ಲ್ಯೂ ಫೌಂಡೇಶನ್, ಸ್ವಾಸ್ತ್ ಅಲೈಯನ್ಸ್ - ಆಕ್ಸ್ ಫಾರ್ ಹೆಲ್ತ್, ಕೋಲ್ಲೇಟ್ ಪಾಮೋಲಿವ್, ಸೀಮೆನ್ಸ್ ಹೆಲ್ತಿ ನಿಯರ್ಸ್ ಮುಂತಾದ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.