ಮೂಗೂರು: ಶಿಥಿಲಾವಸ್ಥೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಕಾಂಪೌಂಡ್ ದಿನೇ ದಿನೆ ಕುಸಿಯುತ್ತಿದೆ.
ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಪರಿವರ್ತಕದ ಕಂಬಗಳಿಗೆ ಕಾಂಪೌಂಡಿನ ಗೋಡೆ ಒರಗಿಕೊಂಡಿದ್ದು ಅಪಾಯಕ್ಕೆ ಆಹ್ವಾನಿಸಿದೆ. ಕಾಂಪೌಂಡ್ ಅಲ್ಲಲ್ಲಿ ಬಿದ್ದು ಹೋಗಿರುವುದರಿಂದ ಪುಂಡರ ಸಂಚಾರ ಹೆಚ್ಚಾಗುವುದರ ಜತೆಗೆ ಸಾರ್ವಜನಿಕರು, ರೈತರು, ದನಕರುಗಳು ಶಾಲೆಯ ಮೈದಾನದಲ್ಲಿ ಸ್ವಚ್ಛಂದವಾಗಿ ತಿರುಗಾಡಲು ದಾರಿಯಾಗಿವೆ. ಶಾಲೆಯ ಅಲಂಕಾರಿಕ ಕೆಲವು ಗಿಡಗಳು ಪ್ರಾಣಿಗಳಿಗೆ ಮೇವಾಗಿ ನಾಶವಾಗಿವೆ.
ಶಾಲೆ ಅವಧಿ ಮುಗಿದ ನಂತರ ಮದ್ಯ ವ್ಯಸನಿಗಳ ಉಪಟಳದಿಂದ ರಂಗಮಂದಿರ ಹಾಗೂ ಶಾಲೆಯ ಇತರ ಕಡೆಗಳಲ್ಲಿ ಮದ್ಯ ಕುಡಿದು ಗಾಜಿನ ಬಾಟಲುಗಳನ್ನು ಒಡೆದು ಬಿಸಾಡಿದ್ದಾರೆ. ಕೆಲ ಕಿಡಿಗೇಡಿಗಳು ಶಾಲೆಯ ಗೋಡೆಗಳ ಮೇಲೆ ಬರಹ ಬರೆದು ವಿದ್ಯುತ್ ದೀಪಗಳನ್ನು ಒಡೆದು ಧ್ವಂಸ ಮಾಡಿದ್ದಾರೆ.
ಶಾಲೆಗೆ ಕಾಂಪೌಂಡ್ ನಿರ್ಮಾಣದ ವಿಚಾರವಾಗಿ ಶಿಕ್ಷಣ ಇಲಾಖೆ, ಕ್ಷೇತ್ರದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಇನ್ನೂ ಕಾರ್ಯಗತವಾಗಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ.