ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಹೊರವಲಯದ ಕ್ಯಾರಕೊಪ್ಪ ಬಳಿ ಶನಿವಾರ ಸಂಜೆ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 3ಕ್ಕೇರಿದೆ.
ಹೊಸಯಲ್ಲಾಪುರ ಕೋಳಿಕೇರಿ ನಿವಾಸಿ ಮಂಜವ್ವ (45), ದುಂಡಿ ಓಣಿಯ ರವಿ ಮಡಿವಾಳರ (38) ಭಾನುವಾರ ಮೃತಪಟ್ಟಿದ್ದಾರೆ. ಕಲಕೇರಿ ಗ್ರಾಮಕ್ಕೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಧಾರವಾಡದ ಹೊಸಯಲ್ಲಾಪುರ ಕೋಳಿಕೇರಿ ನಿವಾಸಿಗಳು ಕ್ರೂಸರ್ನಲ್ಲಿ ತೆರಳುತ್ತಿದ್ದರು. ಕ್ಯಾರಕೊಪ್ಪ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿತ್ತು.
ಘಟನೆಯಲ್ಲಿ ಗಾಯಗೊಂಡಿದ್ದ 14 ಜನರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶಾಂತವ್ವ ನೀರಲಕಟ್ಟಿ (55) ಕಿಮ್ಸ್ನಲ್ಲಿ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿಯೇ ಮೃತಪಟ್ಟಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಮಂಜವ್ವ ಹಾಗೂ ರವಿ ಭಾನುವಾರ ಮೃತಪಟ್ಟಿದ್ದಾರೆ. ಗಾಯಾಳುಗಳಲ್ಲಿ ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.