ಬೆಂಗಳೂರಿನಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕರು ಅಭಿನಂದಿಸಿದರು. ಕೆ.ಸಿ.ಜೋಗಿಗೌಡ, ಪಿ.ಸಂದರ್ಶ್, ಸಿ.ಚಲುವರಾಜು, ಕೆ.ಎನ್.ದಿವಾಕರ್ ಇದ್ದರು. 
ಜಿಲ್ಲೆ

ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಸಿಆರ್‌ಎಸ್ ಶ್ರಮ

ಮದ್ದೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಗುರುವಾರ ಅಭಿನಂದಿಸಿ ಮಾತನಾಡಿ, ಪಕ್ಷ ಸಂಘಟನೆ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಜತೆಗೆ ಜನರ ಸಮಸ್ಯೆಗಳಿಗೆ ಧ್ವನಿಯಾಗಿರುವುದು ಪ್ರಶಂಸನೀಯ ಸಂಗತಿ ಎಂದು ಹರ್ಷವ್ಯಕ್ತಪಡಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ 9 ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿಯಾಗಿರುವುದಕ್ಕೆ ಚಲುವರಾಯಸ್ವಾಮಿ ನೇತೃತ್ವ ವಹಿಸಿರುವೇ ಪ್ರಮುಖ ಕಾರಣ. ಈ ಫಲಿತಾಂಶ ಮುಂಬರುವ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.

ಡಿಸಿಸಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಕಾಂಗ್ರೆಸ್ ಹಿಡಿಯುವುದಕ್ಕೆ ಪ್ರಮುಖ ಕಾರಣ ಚಲುವರಾಯಸ್ವಾಮಿ ಆಗಿದ್ದು, ಡಿಸಿಸಿ ಬ್ಯಾಂಕ್ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ರೈತಾಪಿ ವರ್ಗದ ಅನುಕೂಲಕ್ಕಾಗಿ ಸರ್ಕಾರದಿಂದ ವಿಶೇಷ ಯೋಜನೆಗಳನ್ನು ಜಾರಿಗೆ ತರಲಿದ್ದಾರೆಂದು ವಿಶ್ವಾಸವ್ಯಕ್ತಪಡಿಸಿದರು.

ಮುಂಬರುವ ನಗರಸಭೆ, ಪುರಸಭೆ, ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳು ಜಯಶೀಲರಾಗಲು ಸಚಿವ ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರು ಕಾರ್ಯತಂತ್ರ ರೂಪಿಸಿದ್ದು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈಗಿನಿಂದಲೇ ಚುನಾವಣೆಗೆ ಪೂರ್ವ ತಯಾರಿ ನಡೆಸಬೇಕೆಂದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಚಿವ ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಶಾಸಕರು ಸರ್ಕಾರದಿಂದ ಕೋಟ್ಯಂತರ ರೂ. ವಿಶೇಷ ಅನುದಾನ ತಂದು ರಸ್ತೆಗಳು, ನಾಲೆಗಳು, ಚರಂಡಿ ಸೇರಿದಂತೆ ಸಮಾರೋಪಾದಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವುದು ಜನರ ಕಣ್ಣಿಗೆ ಕಾಣಿಸುತ್ತಿದೆ. ಆದ್ದರಿಂದ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತದಾರರು ಅಶೀರ್ವಾದ ಮಾಡಲಿದ್ದಾರೆಂದರು.

ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕರಾದ ಕೆ.ಸಿ.ಜೋಗಿಗೌಡ, ಪಿ.ಸಂದರ್ಶ, ಸಿ.ಚಲುವರಾಜು, ಮನ್ ಮುಲ್ ನಿರ್ದೇಶಕ ಹರೀಶ್‌ಬಾಬು ಇದ್ದರು.

ಸಚಿವ ಎನ್.ಚಲುವರಾಯಸ್ವಾಮಿ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಾಗಲು ಪ್ರಮುಖ ಕಾರಣರಾಗಿದ್ದಾರೆ. ಜಿಲ್ಲೆಯ ರೈತರ ಜೀವನಾಡಿ ಮೈಷುಗರ್ ಸಕ್ಕರೆ ಕಾರ್ಖಾನೆಗೆ ವಿಶೇಷ ಅನುದಾನ ತಂದು ಕಾರ್ಖಾನೆ ಅಭಿವೃದ್ಧಿಗೆ ಶ್ರಮಿಸುವ ಜತೆಗೆ ಜಿಲ್ಲೆಗೆ ನೀರಾವರಿ ಯೋಜನೆ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ವಿಶೇಷ ಅನುದಾನ ತಂದಿರುವುದನ್ನು ಜಿಲ್ಲೆಯ ಜನರು ಮರೆಯುವುದಿಲ್ಲ ಎಂದರು.

ಕೆ.ಎನ್.ದಿವಾಕರ್

ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಪ್ಪ