ಜಿಲ್ಲೆ

ಡಿ.ಕಾಳೇನಹಳ್ಳಿಯಲ್ಲಿ ನವೀಕೃತ ದೇವಾಲಯ ಸೇವೆಗೆ ಸಮರ್ಪಣೆ

ಎ. ಆರ್. ರಘುರಾಮ
  • ಚನ್ನರಾಯಪಟ್ಟಣ : ತಾಲೂಕಿನ ಡಿ.ಕಾಳೇನಹಳ್ಳಿ ಗ್ರಾಮದಲ್ಲಿ ನವೀಕೃತ ಶ್ರೀ ಲಕ್ಷ್ಮೀದೇವಿ ಅಮ್ಮನವರ ದೇವಾಲಯದಲ್ಲಿ ದೇವಿಯ ನೂತನ ವಿಗ್ರಹ ಪ್ರತಿಷ್ಠಾಪನೆ, ನೂತನ ಶಿಖರ ಗೋಪುರ ಕಳಸ ಹಾಗೂ ಕುಂಭಾಭಿಷೇಕ ಮಹೋತ್ಸವಗಳು ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
    ಡಿ.ಕಾಳೇನಹಳ್ಳಿ ಗ್ರಾಮದೇವತೆ ಲಕ್ಷ್ಮೀದೇವಿ ಸನ್ನಿಧಿ ಶತಮಾನಗಳಷ್ಟು ಹಳೆಯದಾಗಿ ಶಿಥಿಲಗೊಂಡಿತ್ತು. ಹಿನ್ನ್ನೆಲೆಯಲ್ಲಿ ಗ್ರಾಮಸ್ಥರು ಸೇರಿ ಜೀಣೋದ್ಧಾರ ಸೇವೆ ಮಾಡಿದ್ದರು. ಪ್ರತಿಷ್ಠಾಪನೆ ಕಾರ್ಯ ವಿಧಿ, ವಿಧಾನಗಳೊಂದಿಗೆ ನೆರವೇರಿದ್ದು ವಿಶೇಷವಾಗಿತ್ತು.
    ದೇವಿಯ ನೂತನ ವಿಗ್ರಹವನ್ನು ಪಟ್ಟಣದ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದಿಂದ ವಾದ್ಯಗೋಷ್ಠಿಯೊಂದಿಗೆ ಗ್ರಾಮಸ್ಥರು ಮೆರವಣಿಗೆ ಮೂಲಕ ಕರೆ ತಂದರು. ಡಿ.ಕಾಳೇನಹಳ್ಳಿ ಪುರಪ್ರವೇಶ ಮಾಡಿಸಿ, ನಂತರ ಅಮ್ಮನವರನ್ನು ಧಾನ್ಯದ ಮೇಲೆ ಕೂರಿಸಿ, ಪೂಜೆ, ಮಹಾಮಂಗಳಾರತಿ ಸಲ್ಲಿಸಲಾಯಿತು. ಕಳಸ ಸ್ಥಾಪನೆ, ನವಗ್ರಹ ಸ್ಥಾಪನೆ, ಮಹಾಗಣಪತಿ ಪೂಜೆ, ಪುಣ್ಯಾಂಗ, ದೇವಾಲಯ ಬಿಂಬಶುದ್ಧಿ ಹೋಮ ನಡೆಸಿ, ದೇವಸ್ಥಾನಕ್ಕೆ ದಿಗ್ಬಲಿ ಹಾಕಲಾಯಿತು. ಪ್ರಾಕಾರ ಹೋಮ, ರಾಕ್ಷೋಘ್ನ ಹೋಮ, ಅಧಿವಾಸಪೂಜಾ, ಅಷ್ಠಬಂಧನ, ಪೂರ್ವಕ ದೇವಿಯವರ ವಿಗ್ರಹ ಸ್ಥಾಪನೆ ನೆರವೇರಿಸಲಾಯಿತು.