ಜಿಲ್ಲೆ

ಸ್ತ್ರೀಯರು ಎಂದಿಗೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು

ಎ. ಆರ್. ರಘುರಾಮ

ಚನ್ನರಾಯಪಟ್ಟಣ : ಸ್ತ್ರೀಯರು ಎಂದಿಗೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಚಿತ್ರನಟಿ ಮಾಳವಿಕಾ ಅವಿನಾಶ್ ಹೇಳಿದರು.ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಹೇಮಾವತಿ ಒಕ್ಕಲಿಗರ ಮಹಿಳಾ ಮಂಡಳಿಯಿಂದ ಬುಧವಾರಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಜೀವನ ಗಾಥೆಯನ್ನೇ ಹೇಳುವ ಗೃಹಭಂಗ ಕಾದಂಬರಿಯಲ್ಲಿ ಬರುವ ನಂಜಮ್ಮನ ಪಾತ್ರ ಮತ್ತು ಸಂಕಷ್ಟಗಳನ್ನು ವಿವರಿಸಿದ ಮಾಳವಿಕಾ, ಈ ಮಟ್ಟಿಗಿನ ಕಷ್ಟ ಅರ್ಥ ಮಾಡಿಕೊಂಡರೆ ನಮ್ಮ ಬದುಕು ಎಷ್ಟೋ ಎತ್ತರದಲ್ಲಿ ಇದೆ ಎಂಬುದು ಅರ್ಥವಾಗುತ್ತದೆ ಎಂದರು. ಪ್ರತಿ ಮನೆಯ ಮಹಿಳೆಯರೂ ತಮ್ಮ ಮಕ್ಕಳಿಗಾಗಿ ತ್ಯಾಗ ಮಾಡುತ್ತಿದ್ದಾರೆ. ಸಲ್ಪ ಶ್ರಮಿಸಿದರೂ ವಿವಿಧ ಸೌಲಭ್ಯ ದೊರಕುವ ಕಾಲದಲ್ಲಿ ನಾವಿದ್ದೇವೆ. ಇಂದು ಎಲ್ಲವೂ ಸಿಗುತ್ತಿದೆ . ಆದರೆ ನಮ್ಮ ನಮ್ಮ ಹೃದಯ ಶ್ರೀಮಂತಿಕೆ ಕಡಿಮೆಯಾಗುತ್ತಿರುವುದು ವಿಷಾದ ಎಂದರು. ಚಿತ್ರನಟಿ ಸೋನುಗೌಡ ಮಾತನಾಡಿ, ತಾಯಿ ಎಲ್ಲವನ್ನು ಕೊಡುತ್ತಾಳೆ. ಆಕೆ ತ್ಯಾಗ ಹಾಗೂ ಬಲಿದಾನಕ್ಕೂ ಸಿದ್ಧ್ದವಾಗಿರುತ್ತಾಳೆ. ಹಾಗಿರುವಾಗ ಹೆಣ್ಣು ಮಗು ಜನಿಸಿದರೆ ಬೇಸರ ಪಡಬಾರದು. ಹೆಣ್ಣು ಮಕ್ಕಳು ಇಡೀ ಕುಟುಂಬದವರ ಮಾರ್ಗದರ್ಶಕರಾಗಿ ಸದ್ದಿಲ್ಲದೇ ತ್ಯಾಗ ಮಾಡುತ್ತಾರೆ ಎಂದು ಅವರು ಹೇಳಿದರು. ಜಿಪಂ ಮಾಜಿ ಸದಸ್ಯೆ ಸಿ.ಕೆ.ಕುಸುಮಾ ರಾಣಿ ಮಾತನಾಡಿ, ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವನಿತೆಯರ ಆರೋಗ್ಯ ಸರಿ ಇದ್ದರೆ ಇಡೀ ಕುಟುಂಬ ಸುಖವಾಗಿ ಇರುತ್ತದೆ ಎಂದರು.ಮಹಿಳಾ ಮಂಡಳಿ ಗೌರವ ಅಧ್ಯಕ್ಷೆ ಕುಸುಮಾ ಬಾಲಕೃಷ್ಣ, ಅಧ್ಯಕ್ಷೆ ಮೀನಾ ರಾಜಶೇಖರ, ಪದಾಧಿಕಾರಿಗಳಾದ ಮಮತಾ, ಗೀತಾಶ್ರೀ, ಜಯಮ್ಮ, ನಿರ್ಮಲಾಪ್ರಕಾಶ್, ಹೇಮಾಶಂಕರ್, ಭಾಗ್ಯಾ ಚಂದ್ರಪ್ಪ, ವೀಣಾ ಮಂಜಣ್ಣ, ನಾಗರತ್ನಾ ಇದ್ದರು.ಇತರರಿದ್ದರು.