ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಬೆಟ್ಟದ ಟಿಪ್ಪು ಡ್ರಾಪ್‌ನಲ್ಲಿ ಪ್ರಾಕೃತಿಕ ಸೌಂದರ್ಯ ಸವಿಯುತ್ತಿರುವ ಪ್ರವಾಸಿಗರು. 
ಜಿಲ್ಲೆ

ಜಿಲ್ಲೆಯೆಲ್ಲೆಡೆ ಪ್ರವಾಸಿಗರ ದಂಡು!

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಬೆಟ್ಟದ ಟಿಪ್ಪು ಡ್ರಾಪ್‌ನಲ್ಲಿ ಪ್ರಾಕೃತಿಕ ಸೌಂದರ್ಯ ಸವಿಯುತ್ತಿರುವ ಪ್ರವಾಸಿಗರು.

ಎನ್.ವೆಂಕಟೇಶ್

ಎಲ್ಲೆಲ್ಲೂ ಜನದಟ್ಟಣೆ -ಸಾಲು ಸಾಲು ರಜೆಯ ಪರಿಣಾಮ



ಚಿಕ್ಕಬಳ್ಳಾಪುರ: ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಹೆಚ್ಚಿಗೆ ಪ್ರವಾಸಿಗರು ಆಗಮಿಸಿ, ಕಾಲ ಕಳೆದರು. ಭಾನುವಾರ ಬೆಳಗಿನಿಂದಲೂ ನಂದಿ ಬೆಟ್ಟಕ್ಕೆ 15 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಸರದಿ ಸಾಲಿನಲ್ಲಿ ಒಮ್ಮೆಲೇ ಪ್ರವೇಶಿಸಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ಐದಾರು ಕಿ.ಮೀ ದೂರದವರೆಗೂ ವಾಹನಗಳು ನಿಂತಿದ್ದರಿಂದ ಸಂಚಾರದಟ್ಟಣೆ ಉಂಟಾಯಿತು. ಹಾಗೆಯೇ ಆಧ್ಯಾತ್ಮಿಕ ತಾಣ ಈಶ ಆದಿಯೋಗಿ ಧ್ಯಾನ ಕೇಂದ್ರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸಿ, 112 ಅಡಿಗಳ ಎತ್ತರದ ಶಿವ, ಬಸವಣ್ಣ, ನಾಗಮಂಟಪ ವೀಕ್ಷಿಸಿದರು. ಸೆಲ್ಫಿ ಕ್ಲಿಕಿಸಿಕೊಂಡು ಖುಷಿಪಟ್ಟರು.

ಉತ್ತಮ ವಹಿವಾಟು
ಹೆಚ್ಚಿನ ಪ್ರವಾಸಿಗರ ಭೇಟಿ ಹಿನ್ನೆಲೆಯಲ್ಲಿ ಸಾರಿಗೆ, ಹೋಟೆಲ್, ರೆಸಾರ್ಟ್, ಅಂಗಡಿ, ಪೆಟ್ರೋಲ್ ಬಂಕ್ ಸೇರಿ ಇತರ ವ್ಯಾಪಾರ ಕೇಂದ್ರಗಳಿಗೆ ಶನಿವಾರ ಮತ್ತು ಭಾನುವಾರ ಹೆಚ್ಚಿನ ಆದಾಯ ಲಭಿಸಿದೆ. ಬೇಡಿಕೆ ಹೆಚ್ಚಳಕ್ಕೆ ದರವು ಅನಧಿಕೃತ ಲೆಕ್ಕದಲ್ಲಿ ದುಬಾರಿಯಾಗಿತ್ತು.

ದಸರಾ ರಜೆಗೆ ಲಗ್ಗೆ
ಆಯುಧ ಪೂಜೆ, ವಿಜಯದಶಮಿ, ಭಾನುವಾರ ಸೇರಿ ದಸರಾ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನ ಸುತ್ತಮುತ್ತಲ ಭಾಗದ ಜನರು ಸಮೀಪದ ಪ್ರವಾಸಿತಾಣಗಳಿಗೆ ಲಗ್ಗೆಯಿಟ್ಟರು. ಖಾಸಗಿ ಸಂಸ್ಥೆಯ ನೌಕರರ ತಂಡ, ಕುಟುಂಬಸ್ಥರು, ನವದಂಪತಿ, ಪ್ರೇಮಿಗಳು ರಜಾ ದಿನದ ಕಾಲ ಕಳೆದರು. ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಜೋರಾಗಿದ್ದು, ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳತ್ತ ಪ್ರವಾಸಿಗರ ದಂಡೇ ಹರಿದು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಅಲ್ಲಲ್ಲಿ ಭದ್ರತೆಗೆ ಸಿಬ್ಬಂದಿ ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.