ಜಿಲ್ಲೆ

ಮೋದಿಯವರು ಪಾಲ್ಗೊಂಡ ಬಿಜೆಪಿ ವಿಜಯ ಸಂಕಲ್ಪ ಸಮಾವೇಶಕ್ಕೆ ಜನಸಾಗರ

ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಹೊರವಲಯದ ಯಡಿಯೂರಪ್ಪ ಮಾರ್ಗದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಿಜೆಪಿ ವಿಜಯ ಸಂಕಲ್ಪ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದು, ಶಕ್ತಿ ಪ್ರದರ್ಶನ ಮಾಡಿದರು.
 ನಗರವು ಭಾನುವಾರ ಕೇಸರಿ ಶಾಲು, ಕೇಸರಿ ಧ್ವಜ, ಕೇಸರಿ ಪೋಟಿದಾರಿಗಳಿಂದ ತುಂಬಿ ತುಳುಕುತ್ತಿತ್ತು. ನಗರದ ಹೃದಯಭಾಗದಿಂದ ಯಡಿಯೂರಪ್ಪ ಮಾರ್ಗದುದ್ದಕ್ಕೂ ಜನದಟ್ಟಣೆ ಹೆಚ್ಚಿತ್ತು. ಬೆಳಗ್ಗೆ 10 ಗಂಟೆ ಮೋದಿ ಅವರ ಕಾರ್ಯಕ್ರಮ ನಿಗದಿಯಾಗಿದ್ದರಿಂದ ನಿಗದಿತ ಸಮಯಕ್ಕಿಂತಲೂ ಮೊದಲೇ ಜನಸಾಗರ ಸಮಾವೇಶದ ಸ್ಥಳದಲ್ಲಿ ಜಮಾಯಿಸಿದ್ದರು. ದೂರದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ವಿಧಾನಸಭಾ ಕ್ಷೇತ್ರಗಳ ಜನತೆ ನಸುಕಿನಜಾವ ವಾಹನಗಳಲ್ಲಿ ಬೆಳಗಾವಿ ಆಗಮಿಸಿದ್ದರು. ಸಮಾವೇಶದಿಂದಾಗಿ ನಗರದಲ್ಲಿ ಮಧ್ಯಾಹ್ನ 2 ಗಂಟೆವರೆಗೂ ಸಂಚಾರ ದಟ್ಟಣೆಯಾಗಿತ್ತು. ಪೊಲೀಸ್ ಸಿಬ್ಬಂದಿ ಸಮಾವೇಶಕ್ಕೆ ಬರುವ ವಾಹನಗಳಿಗೆ ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದರಿಂದ ಸಂಚಾರ ದಟ್ಟಣೆ ಬೇಗ ನಿಯಂತ್ರಣಕ್ಕೆ ಬಂತು.
 ಮೊಳಗಿದ ಜೈ ಶ್ರೀರಾಮ ಘೋಷಣೆ:
 ನರೇಂದ್ರ ಮೋದಿ ಅವರು ವೇದಿಕೆಗೆ ಬರುವುದಕ್ಕೂ ಮುನ್ನ ಸಮಾವೇಶದ ಸ್ಥಳದಲ್ಲಿ ಜಮಾಯಿಸಿದ್ದ ಜನರು ಜೈ ಶ್ರೀರಾಮ ಘೋಷಣೆ ಕೂಗುತ್ತಿದ್ದರು. ಮೋದಿ ಭಾವಚಿತ್ರಗಳು, ಕಟೌಟ್‌ಗಳನ್ನು ಹಿಡಿದು ಮೋದಿ ಮೋದಿ ಎಂದು ಕೂಗುತ್ತಿದ್ದರು. ಮೋದಿ  ಬರುವುದನ್ನೇ ಕಾತರದಿಂದ ಕಾಯುತ್ತಿದ್ದ ಜನರು, ಕುರ್ಚಿ ಮೇಲೆ ಕುಳಿತುಕೊಳ್ಳದೆ ಎದ್ದು ನಿಂತೇ ಸಿಳ್ಳೆ ಹೊಡೆಯುತ್ತಿದ್ದರು. ಬಳಿಕ ಮೋದಿ ಅವರು ವೇದಿಕೆ ಬಂದ ಬಳಿಕ ಕೇಕೆ ಸಿಳ್ಳೆ, ಜಯಘೋಷಗಳ ಅಬ್ಬರ ಜೋರಾಗಿದ್ದವು. ಸಮಾವೇಶದುದ್ದಕ್ಕೂ ‘ಹರ ಹರ ಮೋದಿ, ಘರ್  ಘರ್ ಮೋದಿ, ಅಬ್ ಕೀ ಬಾರ್ ಮೋದಿ ಸರ್ಕಾರ’ ಎಂಬೆಲ್ಲ ಘೋಷಣೆಗಳನ್ನು ಕೂಗಿದರು.
 ವಾಹನಗಳ ಪಾರ್ಕಿಂಗ್ ವ್ಯವಸ್ಥೆ:
 ಬೆಳಗಾವಿ ನಗರದಿಂದ ಬರುವ ವಾಹನಗಳಿಗೆ ಯಡಿಯೂರಪ್ಪ ಮಾರ್ಗದ ಬಳ್ಳಾರಿ ನಾಲಾ ಹತ್ತಿರದ ಜ್ಯೋತಿ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ನಿಪ್ಪಾಣಿ, ಅಥಣಿ, ಚಿಕ್ಕೋಡಿ, ರಾಯಬಾಗ, ಕುಡಚಿ, ಸಂಕೇಶ್ವರ, ಹುಕ್ಕೇರಿ ಭಾಗಗಳ ವಾಹನಗಳಿಗೆ ಹಲಗಾ-ಮಚ್ಛೆ ಬೈಪಾಸ್ ರಸ್ತೆಯಲ್ಲಿ ಪಾರ್ಕಿಂಗ್ ಮಾಡಿಸಲಾಗಿತ್ತು. ಬೈಲಹೊಂಗಲ, ಬಾಗೇವಾಡಿ, ರಾಮದುರ್ಗ, ಸವದತ್ತಿ ಭಾಗಗಳ ವಾಹನಗಳಿಗೆ ಅಲಾರವಾಡ ಸರ್ವಿಸ್ ರಸ್ತೆಯ ಪಶ್ಚಿಮ ಬದಿ ಹಾಗೂ ಗೋಕಾಕ, ಅರಬಾವಿ, ಘಟಪ್ರಭಾ ಭಾಗಗಳಿಂದ ಬರುವ ವಾಹನಗಳ ನಿಲುಗಡೆಗೆ ಅಲಾರವಾಡ ಸರ್ವಿಸ್ ರಸ್ತೆಯ ಪೂರ್ವ ಬದಿ ವ್ಯವಸ್ಥೆ ಮಾಡಲಾಗಿತ್ತು. ಸಮಾವೇಶ ಮುಗಿದ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲೂ ಜನದಟ್ಟಣೆ ಕಂಡುಬಂತು.
 ಕೇಕೆ, ಸಿಳ್ಳೆ ಹಾಕಿದ ಜನ
 ನರೇಂದ್ರ ಮೋದಿ ಅವರು ಭಾಷಣದ ವೇಳೆ ಸವದತ್ತಿ ಯಲ್ಲಮ್ಮ ದೇವಿ ಸ್ಮರಿಸಿ ಭಾಷಣ ಆರಂಭಿಸಿದಾಗ ಜನರು ಹುಚ್ಚೆದ್ದು ಕೇಕೆ ಹಾಕಿದರು. ನಾನು ರಾಜ್ಯ ಯಾವುದೇ ಮೂಲೆಗೆ ಹೋದರು, ‘ಪಿರ್ ಏಕ್ ಬಾರ್ ಮೋದಿ’ ಘೋಷಣೆ ಕೇಳುತ್ತಿದ್ದೇನೆ. ನಾವು ಛತ್ರಪತಿ  ಶಿವಾಜಿ ಮಹಾರಾಜ ಮತ್ತು ಜಗಜ್ಯೋತಿ ಬಸವೇಶ್ವರರ ಅನುಯಾಯಿಗಳು ಎಂದು ಮೋದಿ ಭಾಷಣದ ವೇಳೆ ಹೇಳಿದಾಗ ಜನರ ಕೇಕೆ, ಚಪ್ಪಾಳೆ ನಿಲ್ಲಲಿಲ್ಲ.