ಜಿಲ್ಲೆ

ಕೋಮುಲ್ ನಾಮಪತ್ರ ಸಲ್ಲಿಕೆ ಭರಾಟೆ

ಕೋಲಾರ: ಕೋಲಾರ ಹಾಲು ಒಕ್ಕೂಟದ ಆಡಳಿತ ಮಂಡಳಿಯ ಚುನಾವಣೆಗೆ ಸೋಮವಾರ ನಾಮಪತ್ರಗಳ ಸಲ್ಲಿಕೆಯ ಭರಾಟೆ ಜೋರಾಗಿತ್ತು. ಆಯಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಶಾಸಕರು ಮತ್ತು ಮುಖಂಡರು ನಾಮಪತ್ರ ಸಲ್ಲಿಕೆ ವೇಳೆ ಸಾಥ್​ ನೀಡಿ ಹೊರಬರುತ್ತಿದ್ದಂತೆ ಕಾರ್ಯಕರ್ತರಿಂದ ಘೋಷಣೆಗಳು ಹೆಚ್ಚಾಗುತ್ತಿದ್ದವು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ಚದುರಿಸಲು ಹರಸಾಹಸ ಪಡಬೇಕಾಯಿತು.

ನಾಮಪತ್ರಗಳ ಸಲ್ಲಿಕೆಗೆ ಜೂ.17 ಕಡೇ ದಿನ ಹಾಗೂ ಮಂಗಳವಾರವಾದ ಕಾರಣ ಆಯಾ ಕ್ಷೇತ್ರದ ಅಭ್ಯರ್ಥಿಗಳು, ಶಾಸಕರು, ಮುಖಂಡರ ಸಮೇತ ಏಕಕಾಲಕ್ಕೆ ನಾಮಪತ್ರ ಸಲ್ಲಿಸಲು ಆಗಮಿಸಿದ ಕಾರಣ ನೂಕು ನುಗ್ಗಲು ಸೃಷ್ಟಿಯಾಯಿತು.

ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ 2ನೇ ಬಾರಿ ನಾಮಪತ್ರ ಸಲ್ಲಿಸಿದರೆ, ದಕ್ಷಿಣ ಮಹಿಳಾ ಮೀಸಲು ಕ್ಷೇತ್ರದಿಂದ ಅಭ್ಯರ್ಥಿ ಪ್ರತಿಭಾ ಸಮೇತ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಡಿಸಿಸಿ ಬ್ಯಾಂಕ್​ ಮಾಜಿ ಅಧ್ಯಕ್ಷ ಗೋವಿಂದಗೌಡ, ಜಿಲ್ಲಾ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಚಂದ್ರಾರೆಡ್ಡಿ ಸಮೇತ ನಾಮಪತ್ರ ಸಲ್ಲಿಸಿದರು.

ಕೋಲಾರ ಈಶಾನ್ಯ ಕ್ಷೇತ್ರದಿಂದ ಮಾಜಿ ನಿರ್ದೇಶಕ ಡಿ.ವಿ ಹರೀಶ್​ ಹಾಗೂ ವೇಮಗಲ್​ ಕ್ಷೇತ್ರದಿಂದ ಕೃಷ್ಣಪ್ಪ ಅವರು ನಾಮಪತ್ರ ಸಲ್ಲಿಕೆ ವೇಳೆ ಜಿಲ್ಲಾ ಜೆಡಿಎಸ್​ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಸಂಸದ ಎಂ.ಮಲ್ಲೇಶ್​ಬಾಬು, ಎಂಎಲ್​ಸಿ ಇಂಚರ ಗೋವಿಂದರಾಜು, ಮಾಜಿ ಸಚಿವ ವರ್ತೂರು ಪ್ರಕಾಶ್​, ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ, ಮುಖಂಡರಾದ ಸಿ.ಎಂ.ಆರ್​.ಶ್ರೀನಾಥ್​ ಸೇರಿ ಇತರರು ಸಾಥ್​ ನೀಡಿದರು.

ಎಂಎಲ್​ಸಿ ಅನಿಲ್​ಕುಮಾರ್​ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್​ ಮುಖಂಡರು ಚುನಾವಣಾ ಪ್ರಚಾರದಲ್ಲಿ ಮತದಾರರ ಸಂಖ್ಯೆ ಕಡಿಮೆ ಇದ್ದರೂ ಹೆಚ್ಚು ಮತದಾನ ನಮ್ಮಪರ ಇದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ ಎಂದರು.

ವೇಮಗಲ್​ ಕ್ಷೇತ್ರದಿಂದ ಚಂಜಿಮಲೆ ರಮೇಶ್​ ಮತ್ತು ಕೋಲಾರ ನೈರುತ್ಯ ಕ್ಷೇತ್ರದಿಂದ ನಾಗನಾಳ ಸೋಮಣ್ಣ ನಾಮಪತ್ರ ಸಲ್ಲಿಕೆ ವೇಳೆ ಶಾಸಕ ಕೊತ್ತೂರು ಮಂಜುನಾಥ್​, ಎಂಎಲ್​ಸಿ ಅನಿಲ್​ಕುಮಾರ್​ ಕೋಚಿಮುಲ್​ ಮಾಜಿ ಅಧ್ಯಕ್ಷ ಎನ್​.ಜಿ.ಬ್ಯಾಟಪ್ಪ ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮಹಿಳಾ ಮೀಸಲು ಉತ್ತರ ಕ್ಷೇತ್ರಕ್ಕೆ ಮಹಾಲಕ್ಷ್ಮೀ ಪ್ರಸಾದ್​ಬಾಬು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಲಕ್ಷ್ಮೀ ನಾರಾಯಣ, ಮುಖಂಡರಾದ ಎಲ್​.ಎ.ಮಂಜುನಾಥ್​ ಸೇರಿ ಕೆಲವು ಕಾರ್ಯಕರ್ತರು ಸಾಥ್​ ನೀಡಿದರು. ಒಟ್ಟು 18 ಉಮೇದುವಾರಿಕೆ ಸಲ್ಲಿಕೆಯಾಗಿವೆ.

ಅಧಿಕೃತವಲ್ಲದವರಿಗಿಲ್ಲ ಬೆಂಬಲ

ಶಾಸಕ ಕೊತ್ತೂರು ಮಂಜುನಾಥ್​ ಮಾತನಾಡಿ, ಹೈಕಮಾಂಡ್​ ಸೂಚನೆ ಇಲ್ಲದೆ ಯಾರೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರೂ ಅವರಿಗೆ ನಮ್ಮ ಬೆಂಬಲವಿಲ್ಲ. ಅಧಿಕೃತ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ 13 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತೇವೆ. ಅಧಿಕೃತ ಅಭ್ಯರ್ಥಿಯಾಗಿ ಚಂಜಿಮಲೆ ರಮೇಶ್​, ನಾಗನಾಳ ಸೋಮಣ್ಣ ಆಗಿದ್ದಾರೆ. ಮಹಿಳಾ ಮೀಸಲು ಉತ್ತರ ಕ್ಷೇತ್ರಕ್ಕೆ ಮಹಾಲಕ್ಷಿ$್ಮ ಪ್ರಸಾದ್​ ಬಾಬುಗೆ ಸೂಚನೆ ನೀಡಿಲ್ಲ. ನಾಮಪತ್ರ ವಾಪಸ್​ ಪಡೆಯಲು ಕಾಲಾವಕಾಶ ಇದೆ. ಅಧಿಕೃತ ಅಭ್ಯರ್ಥಿಯನ್ನು ಫೈನಲ್​ ಮಾಡುತ್ತೇವೆ. ವೇಮಗಲ್​ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿದ ಕೃಷ್ಣಪ್ಪ ಅವರನ್ನು ಕಾಂಗ್ರೆಸ್​ನವರೆಂದು ಪರಿಗಣಿಸುವುದಿಲ್ಲ, ಅವರು ನಾಮಪತ್ರ ವಾಪಸ್​ ಪಡೆದರೆ ಸಂತೋಷ ಎಂದರು.