ವಿಜಯಪುರ, ರಾಜ್ಯ ಸರ್ಕಾರ, ಸರ್ಕಾರಿ ಬಸ್, ಮಹಿಳೆಯರಿಗೆ, ಉಚಿತ ಪ್ರಯಾಣ, ಪ್ರವಾಸಿ ತಾಣ,
ವಿಜಯಪುರ: ರಾಜ್ಯ ಸರ್ಕಾರ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದ್ದೇ ತಡ ಅದರ ಸದುಪಯೋಗ ಪಡೆದುಕೊಳ್ಳಲು ಮಹಿಳಾ ಮಣಿಗಳು ಕುಟುಂಬ ಸಮೇತ ಪ್ರವಾಸಿ ತಾಣಗಳತ್ತ ದೌಡಾಯಿಸಿದ್ದಾರೆ.
ವಿಜಯಪುರದ ಐತಿಹಾಸಿಕ ಗೋಳಗುಮ್ಮಟ ವೀಕ್ಷಣೆಗೆ ಭಾನುವಾರ ಮಹಿಳೆಯರ ದಂಡೇ ಹರಿದು ಬಂದಿದೆ. ಗೋಳಗುಮ್ಮಟ ಹಾಗೂ ಇಬ್ರಾಹಿಂ ರೋಜಾ ವೀಕ್ಷಣೆಗೆ ಬೆಳಗ್ಗೆಯಿಂದಲೇ ಟಿಕೆಟ್‌ಗಾಗಿ ನೂಕುನುಗ್ಗಲು ಕಂಡುಬಂತು. ಬೆಳಗ್ಗೆ 8 ಗಂಟೆಯಿಂದಲೇ ಗೋಳಗುಮ್ಮಟ ವೀಕ್ಷಣೆಗೆ ಮಹಿಳೆಯರು ತಮ್ಮ ಮಕ್ಕಳ ಜತೆ ಆಗಮಿಸಿ ಗೋಳಗುಮ್ಮಟ ವೀಕ್ಷಣೆ ಮಾಡಲು ಮುಗಿಬಿದ್ದಿದ್ದರು. ಬೆಳಗ್ಗೆ 10 ಗಂಟೆಯಷ್ಟರಲ್ಲಿ ಸರಿಸುಮಾರು ಸಾವಿರಕ್ಕೂ ಅಧಿಕ ಪ್ರವಾಸಿಗರು ಗೋಳಗುಮ್ಮಟ ವೀಕ್ಷಣೆ ಮಾಡಿದ್ದರು. ಸಂಜೆ 4 ಗಂಟೆ ಸುಮಾರಿಗೆ 5 ಸಾವಿರಕ್ಕೂ ಅಧಿಕ ಪ್ರವಾಸಿಗರು ಟಿಕೆಟ್ ಪಡೆದು ಗೋಳಗುಮ್ಮಟ ವೀಕ್ಷಿಸಿದ್ದಾರೆ. ಹೀಗಾಗಿ ಭಾನುವಾರವೇ ಟಿಕೆಟ್ ನಿಂದ 1.25 ಲಕ್ಷ ರೂ. ಸಂಗ್ರಹವಾಗಿದ್ದು ವಿಶೇಷ. ಪುರಾತತ್ವ ಇಲಾಖೆಯ ಮಾಹಿತಿಯಂತೆ ಕಳೆದ ಐದು ವರ್ಷದಲ್ಲಿ ಒಂದೇ ದಿನ ಇಷ್ಟು ಪ್ರವಾಸಿಗರು ಬಂದಿರುವ ಇತಿಹಾಸವೇ ಇಲ್ಲ.
ವೀಕೆಂಡ್ ರಜೆ ಇರುವ ಕಾರಣ ದೂರದ ಬೆಂಗಳೂರು, ಮೈಸೂರು, ಕೋಲಾರ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಯಿಂದ ಮಹಿಳೆಯರು ವಿಜಯಪುರಕ್ಕೆ ಪ್ರವಾಸ ಕೈಗೊಂಡಿದ್ದಾರೆ.
ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿರುವ ಕಾರಣ ಒಂದು ವಾರದಿಂದ ಮಹಿಳೆಯರು ರಾಜ್ಯ ಪ್ರವಾಸ ಕೈಗೊಂಡಿದ್ದು, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಹಂಪಿ ಸೇರಿದಂತೆ ನಾನಾ ದೇವಸ್ಥಾನ, ಪ್ರವಾಸಿ ತಾಣಗಳನ್ನು ವೀಕ್ಷಿಸಿ ಭಾನುವಾರ ವಿಜಯಪುರ ನಗರಕ್ಕೆ ಆಗಮಿಸಿದ್ದರು. ಗೋಳಗುಮ್ಮಟ ನೋಡುವ ತವಕದಲ್ಲಿದ್ದ ಮಹಿಳೆಯರು ತಮ್ಮ ಸಂತಸ ಹಲವು ಕಡೆ ಹಂಚಿಕೊಂಡರು.
ಪ್ರವಾಸಿಗರು ಗೋಳಗುಮ್ಮಟ ಪ್ರವೇಶಕ್ಕೆ ನಿಗದಿತ ಮೊತ್ತ ಪಾವತಿಸಿ ಒಳ ನಡೆದರೆ ಕೆಲವರು ಗೋಳಗುಮ್ಮಟ ಪ್ರವೇಶಕ್ಕೂ ಉಚಿತ ಅವಕಾಶ ಮಾಡಿಕೊಡಿ ಎಂದು ಭದ್ರತೆ ಸಿಬ್ಬಂದಿಯೊಂದಿಗೆ ವಾದ ನಡೆಸಿದ ಪ್ರಸಂಗವೂ ನಡೆಯಿತು.
ಮಹಿಳೆಯರು ಎಲ್ಲೇ ಹೋದರೂ ಸಹ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವುದು ಸಾಮಾನ್ಯ. ಅದರಂತೆ ಇಂದು ಗೋಳಗುಮ್ಮಟಕ್ಕೆ ಆಗಮಿಸಿದ್ದ ಮಹಿಳೆಯರು ಮಕ್ಕಳೊಂದಿಗೆ ಆಗಮಿಸಿದ ಪರಿಣಾಮ ಗೋಳಗುಮ್ಮಟ ಆವರಣದಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯೇ ಹೆಚ್ಚಾಗಿ ಕಂಡು ಬಂತು.
ವಾಹನ ನಿಲ್ಲಿಸಲು ವ್ಯವಸ್ಥೆ
ಫ್ರಿ ಬಸ್ ವ್ಯವಸ್ಥೆ ಇರುವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದರ ಜತೆ ಮಹಾರಾಷ್ಟ್ರದಿಂದ ಕಾರು, ಬಂದವರ ಸಂಖ್ಯೆಯೂ ಅಧಿಕವಾಗಿತ್ತು. ಅದಕ್ಕೆ ವಾಹನ ನಿಲ್ಲಿಸಲು ಪ್ರತ್ಯೇಕ ವ್ಯವಸ್ಥೆ ಸಹ ಮಾಡಿರುವುದು ಕಂಡುಬಂತು.
ರಾಜ್ಯ ಸರ್ಕಾರ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಫ್ರೀ ಪ್ರಯಾಣದ ಭಾಗ್ಯ ನೀಡಿರುವುದು. ಒಳ್ಳೆಯ ಬೆಳವಣಿಗೆಯಾಗಿದೆ. ಇದರಿಂದ ಹಲವು ವರ್ಷಗಳಿಂದ ಮನೆಯಿಂದ ಹೊರಗೆ ಬರದ ನಾವು, ಈಗ ಮಕ್ಕಳ ಸಮೇತ ಪ್ರವಾಸ ಮಾಡುತ್ತಿದ್ದೇವೆ. ಕಳೆದ ಮೂರು ದಿನಗಳ ಹಿಂದೆ ಮನೆ ಬಿಟ್ಟು ಪ್ರವಾಸಕ್ಕೆ ಬಂದಿದ್ದೇವೆ. ಕೆಲವು ಪ್ರೇಕ್ಷಣಿಕ ಸ್ಥಳ, ಧಾರ್ಮಿಕ ಸ್ಥಳ ವೀಕ್ಷಣೆ ಮಾಡಿ ಇಂದು ಬೆಳಗ್ಗೆ ವಿಜಯಪುರಕ್ಕೆ ಆಗಮಿಸಿದ್ದೇವು. ಈಗ ಗೋಳಗುಮ್ಮಟ ನೋಡಿ ಸಂತಸವಾಗಿದೆ. ಸರ್ಕಾರ ಮಹಿಳೆಯರಿಗೆ ಉಚಿತ ಬದಲು ಶೇ. 50ರಷ್ಟು ರಿಯಾಯಿತಿ ನೀಡಿ, ಪುರುಷರಿಗೂ ಶೇ. 50ರಷ್ಟು ರಿಯಾಯಿತಿ ನೀಡಿದ್ದರೇ ಇನ್ನೂ ಉತ್ತಮವಾಗುತ್ತಿತ್ತು. ಪೂರ್ಣಿಮಾ ಕಡಿ, ಪ್ರವಾಸಿಗರು, ಕೊಲ್ಹಾರ
ಸರ್ಕಾರದ ಈ ನಿರ್ಧಾರ ತಪ್ಪಾಗಿದೆ. ಎಲ್ಲವೂ ಉಚಿತ ನೀಡಿದರೆ, ಹಣಕಾಸಿನ ವ್ಯವಸ್ಥೆ ಏನಾಗಬೇಕು. ಕೆಲವರನ್ನು ಸಂತೃಪ್ತಿ ಪಡಿಸಲು ಎಲ್ಲರ ಮೇಲೆ ಹೊರೆ ಹೇರಿದ್ದಾರೆ. ನಿಮಗೆ ಓಟ್ ಕೇವಲ ಮಹಿಳೆಯರು ಮಾತ್ರ ಹಾಕಿಲ್ಲ, ಪುರುಷರು ಸಹ ಹಾಕಿದ್ದಾರೆ. ಅದನ್ನು ತಿಳಿದುಕೊಳ್ಳಬೇಕು. ಫ್ರೀ ಬಸ್ ಪ್ರಯಾಣದಿಂದ ಮುಂದಿನ ದಿನ ಜನ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಗುರುಪಾದಪ್ಪ, ಬಸವನಬಾಗೇವಾಡಿ