ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಲು ಕಿಲೋಮೀಟರ್ ಉದ್ದಕ್ಕೆ ಸರತಿಯಲ್ಲಿ ಕಾದುನಿಂತಿರುವ ಪ್ರವಾಸಿಗರು. 
ಜಿಲ್ಲೆ

ಗೋಪಾಲ’ನ ದರ್ಶನಕ್ಕೆ ಭಕ್ತರ ದಂಡು

ಲೋಕೇಶ್ ಮನು. ಡಿ

ಗುಂಡ್ಲುಪೇಟೆ: ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಿನೇದಿನೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು, ಸಾರಿಗೆ ಸಂಸ್ಥೆಗೆ ಲಕ್ಷಾಂತರ ರೂ. ಆದಾಯ ಸಂಗ್ರಹವಾಗುತ್ತಿದೆ.

ಶಕ್ತಿ ಯೋಜನೆ ಜಾರಿಗೆ ಬಂದ ನಂತರ ರಾಜ್ಯದ ವಿವಿಧ ಮೂಲೆಗಳಿಂದಲೂ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ. ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಅತಿ ಹೆಚ್ಚಿನ ಪ್ರವಾಸಿಗರು ಆಗಮಿಸುವುದರಿಂದ ಜನರ ಸಂಖ್ಯೆಗನುಗುಣವಾಗಿ ಬಸ್ ಒದಗಿಸಲು ಸಾರಿಗೆ ಸಂಸ್ಥೆ ಬೇರೆ ಬೇರೆ ಮಾರ್ಗಗಳಿಗೆ ಹೋಗುತ್ತಿದ್ದ ಬಸ್ಸುಗಳನ್ನು ಬಳಕೆ ಮಾಡಿಕೊಳ್ಳುವಂತಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿದ ಹಿಮವದ್ ಗೋಪಾಲಸ್ವಾಮಿಬೆಟ್ಟಕ್ಕೆ ಅರಣ್ಯ ಇಲಾಖೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಿದೆ. ದೇವಾಲಯಕ್ಕೆ ಹೋಗಲು ಬರುವ ಪ್ರವಾಸಿಗರು ಬೆಟ್ಟದ ತಪ್ಪಲಿನಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಸಾರಿಗೆ ಬಸ್ಸುಗಳಲ್ಲಿಯೇ ಹೋಗಿ ಬರಬೇಕಾಗಿದೆ. ಹಿಂದಿನಿಂದಲೂ ಸಾರಿಗೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕೆ ಬಸ್‌ಗಳ ಸೌಲಭ್ಯ ಒದಗಿಸುತ್ತಾ ಬಂದಿದೆ. ಬೆಟ್ಟದ ತಪ್ಪಲಿನಲ್ಲಿ ಟಿಕೆಟ್ ಕೌಂಟರ್ ತೆರೆದು ಪ್ರಯಾಣಿಕರಿಗೆ ಟಿಕೆಟ್ ವಿತರಿಸುತ್ತಿದ್ದು, ಟಿಕೆಟ್ ಪಡೆದ ಪ್ರಯಾಣಿಕರು ಗೇಟ್ ಒಳಗೆ ಪ್ರವೇಶಿಸಿ ಅಲ್ಲಿಂದ ಬಸ್ಸುಗಳಲ್ಲಿ ಬೆಟ್ಟಕ್ಕೆ ಹೋಗಿಬರಲು ವ್ಯವಸ್ಥೆ ಮಾಡಲಾಗಿದೆ. ಸಂಸ್ಥೆ ದಿನವೂ 4 ರಿಂದ 5 ಲಕ್ಷ ರೂ.ವರೆಗೆ ಆದಾಯ ಸಂಗ್ರಹಿಸಿದೆ.

ಸಾಮಾನ್ಯ ದಿನಗಳಲ್ಲಿ 3-4 ಬಸ್‌ಗಳನ್ನು ನಿಯೋಜಿಸುವ ಸಾರಿಗೆ ಸಂಸ್ಥೆ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಹರಿದುಬರುವ ಪ್ರವಾಸಿಗರ ಸಂಖ್ಯೆಗೆ ತಕ್ಕಂತೆ ಹೆಚ್ಚಿನ ಬಸ್ಸುಗಳನ್ನು ಕಳಿಸುತ್ತಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದಂತೆ ಗೇಟ್‌ನಲ್ಲಿರುವ ಸಾರಿಗೆ ಸಿಬ್ಬಂದಿ ಹೆಚ್ಚಿನ ಬಸ್ಸುಗಳಿಗೆ ಮನವಿ ಮಾಡಿದರೂ ಪಟ್ಟಣದ ಡಿಪೋದಿಂದ ಬಸ್ ಬರುವವರೆಗೆ ವಯಸ್ಸಾದ ವೃದ್ಧರು, ಮಹಿಳೆಯರು, ಮಕ್ಕಳು ಕಿಲೋಮೀಟರ್‌ಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯುವಂತಾಗಿದೆ.

ಹೀಗಾಗಿ ಸಾರಿಗೆ ಸಂಸ್ಥೆ ಮತ್ತು ಅರಣ್ಯ ಇಲಾಖೆ ಇನ್ನು ಹೆಚ್ಚುವರಿ ವಾಹನಗಳನ್ನು ನಿಯೋಜಿಸುವ ಮೂಲಕ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.