ಡಿ.ವಿ. ಕಮ್ಮಾರ, ಧಾರವಾಡ
ಯಾವುದೇ ಒಂದು ಜನವಸತಿ ಪ್ರದೇಶದಲ್ಲಿದ್ದ ಮುಖ್ಯರಸ್ತೆ ಹೊರತುಪಡಿಸಿ ಬೈಪಾಸ್ ಮಾಡಿದಲ್ಲಿ, ಮೊದಲಿದ್ದ ಸಂಪರ್ಕವನ್ನು ಹಾಗೆಯೇ ಉಳಿಸಿಕೊಳ್ಳುವುದು ಸಾಮಾನ್ಯ. ಆದರೆ, ಧಾರವಾಡ ತಾಲೂಕಿನ ಅಳ್ನಾವರ ರಸ್ತೆಯಲ್ಲಿ ನಿರ್ಮಿಸಿರುವ ಬೈಪಾಸ್‌ನಿಂದಾಗಿ ಈ ಮೊದಲು ಮುಖ್ಯ ರಸ್ತೆಯ ಸಂಪರ್ಕದಲ್ಲಿದ್ದ ಮಂಡಿಹಾಳ ಹಾಗೂ 10ಕ್ಕೂ ಹೆಚ್ಚು ಗ್ರಾಮಗಳು ಮುಖ್ಯ ಸಂಪರ್ಕವನ್ನೇ ಕಡಿದುಕೊಂಡಿದ್ದು, ಸುತ್ತುವರಿದು ಬರಬೇಕಿದೆ.
ಮೊದಲಿನ ಸಂಪರ್ಕವನ್ನೇ ಮುಂದುವರಿಸುವಂತೆ ಆಗ್ರಹಿಸಿ ನಿರಂತರ ಹೋರಾಟ ನಡೆಯುತ್ತಲೇ ಇದೆ. ಈ ಮೊದಲು ಧಾರವಾಡ-ಅಳ್ನಾವರ ರಸ್ತೆ ರಾಜ್ಯ ಹೆದ್ದಾರಿಯಾಗಿತ್ತು. ಆಗ ಮುಗದ ಕ್ರಾಸ್ ನಂತರ ಈ ರಸ್ತೆ ಮಂಡಿಹಾಳ ಗ್ರಾಮವನ್ನು ದಾಟಿಯೇ ಹೋಗುತ್ತಿತ್ತು. ಆದರೆ, 2008-09ರಲ್ಲಿ ಮುಗದ ಗ್ರಾಮದಲ್ಲಿದ್ದ ರೈಲ್ವೆ ನಿಲ್ದಾಣವನ್ನು ಸ್ಥಳಾಂತರ ಮಾಡಲಾಯಿತು. ನಿಲ್ದಾಣ ಸ್ಥಳಾಂತರದ ಜತೆಗೆ ಜೋಡಿ ಹಳಿ ನಿರ್ಮಾಣ ಕಾರ್ಯವೂ ನಡೆಯಿತು. ಆಗ ಮಂಡಿಹಾಳ ಗ್ರಾಮದ ಕಡೆ ಇದ್ದ ರಸ್ತೆಯನ್ನು ನಿಲ್ದಾಣದ ಈಚೆ ಬದಿಗೆ ಬೈಪಾಸ್ ಮಾಡಲಾಯಿತು. ಆಗ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡಿತು. ಆದರೆ, ಮೊದಲಿದ್ದ ಸಂಪರ್ಕ ರಸ್ತೆಯೇ ಕಡಿತಗೊಂಡಿತು. ಈಗ ನಿಲ್ದಾಣ ಇರುವ ಸಮೀಪದಲ್ಲಿ ಮೊದಲು ಮಂಡಿಹಾಳ ಗ್ರಾಮ ಸಂಪರ್ಕಿಸುವ ರಸ್ತೆಗೆ ರೈಲ್ವೆ ಗೇಟ್ ( ಗೇಟ್ ನಂ. 308) ಇತ್ತು. ಆದರೆ, ಯಾವಾಗ ನಿಲ್ದಾಣ ಸ್ಥಳಾಂತರಗೊಂಡಿತೋ ಆಗ ಈ ಗೇಟ್ ಅನ್ನೇ ತೆಗೆದು ಹಾಕಿ, ನಿಲ್ದಾಣದ ಆಚೆ ಬದಿಯಲ್ಲಿ ದೂರದಲ್ಲಿ ರಸ್ತೆ ಕೇಳಸೇತುವೆ ನಿರ್ಮಿಸಲಾಗಿದೆ.
ಹೊಸದಾಗಿ ನಿರ್ಮಿಸಿರುವ ಸೇತುವೆ ಗ್ರಾಮದಿಂದ 2 ಕಿಮೀ ದೂರದಲ್ಲಿದೆ. ಹೀಗಾಗಿ, ಇಂದಿಗೂ ಮಂಡಿವಾಳ ಗ್ರಾಮಸ್ಥರು ಮೊದಲು ಗೇಟ್ ಇದ್ದ ಸ್ಥಳದಲ್ಲಿಯೇ ಹಳಿಯನ್ನು ದಾಟಿ ಮುಖ್ಯ ರಸ್ತೆಗೆ ಬರುತ್ತಿದ್ದಾರೆ. ಆಚೆಯಲ್ಲಿ ಇರುವ ರೈಲ್ವೆ ಸೇತುವೆ ಮೂಲಕ ಹೋಗಬೇಕಾದರೆ ಗ್ರಾಮದಿಂದ ದೂರವಿದೆ. ಮಾತ್ರವಲ್ಲ ಆ ಸೇತುವೆ ಸಂಪರ್ಕಿಸಲು ಸರಿಯಾದ ರಸ್ತೆಯೂ ಇಲ್ಲ.
ಸೇತುವೆ ಸಂಪರ್ಕಿಸುವ ರಸ್ತೆಯ ಮಧ್ಯದಲ್ಲಿ ಖಾಸಗಿ ಜಮೀನಿದೆ. ಹೀಗಾಗಿ ರಸ್ತೆಯನ್ನೂ ಅಭಿವೃದ್ಧಿ ಮಾಡಿಲ್ಲ. ತೆಗ್ಗು ಗುಂಡಿಗಳೇ ಹೆಚ್ಚಿವೆ. ಆದರೆ ಎಲ್ಲಿ ಅಗತ್ಯ ಇದೆಯೋ ಅಲ್ಲಿ ಮಾತ್ರ ಪುನಃ ರೈಲ್ವೆ ಗೇಟ್ ಆಗಲಿ, ಸೇತುವೆಯಾಗಲಿ ಆಗಿಯೇ ಇಲ್ಲ.
ತಮ್ಮೂರಿನ ಮುಖ್ಯ ಸಂಪರ್ಕ ಕಡಿತವಾದಂದಿನಿಂದಲೇ ಮಂಡಿಹಾಳ ಗ್ರಾಮಸ್ಥರು ಹೋರಾಟ ಆರಂಭಿಸಿದ್ದಾರೆ. ಮಂಡಿಹಾಳ ಜತೆಗೆ ವರವ ನಾಗಲಾವಿ, ರಾಮಾಪುರ, ವೀರಾಪುರ, ಕಲ್ಲಾಪುರ, ಹೊಸವಾಳ, ದುರ್ಗದಕೇರಿ ಸೇರಿ 10ಕ್ಕೂ ಹೆಚ್ಚು ಗ್ರಾಮಗಳು ಸಮೀಪದಲ್ಲಿದ್ದ ರಸ್ತೆ ಸಂಪರ್ಕವನ್ನೇ ಕಡಿದುಕೊಂಡಿವೆ. ಹೊಸದಾಗಿ ಮಾಡಿರುವ ಸೇತುವೆ ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತದೆ. ಇನ್ನು ಕಬ್ಬು ಸಾಗಿಸುವ ಲಾರಿಗಳಂತೂ ಇಲ್ಲಿ ದಾಟುವುದೇ ಇಲ್ಲ. ಹೀಗಾಗಿ ಅನೇಕ ಸಮಸ್ಯೆಗಳು ಆಗುತ್ತಿವೆ.
ಮೊದಲು ಗೇಟ್ ಇದ್ದ ಸ್ಥಳದಲ್ಲಿ ಸೇತುವೆ ಮಾಡಿಕೊಡಿ ಎಂದು ಕೇಳಿಕೊಂಡು ಗ್ರಾಪಂದಿಂದ ಹಿಡಿದು ಕೇಂದ್ರ ರೈಲ್ವೆ ಸಚಿವರವರೆಗೂ ಮನವಿ ಮಾಡಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಈ ಹಿಂದೆ ರೈಲ್ವೆ ಇಲಾಖೆಯಲ್ಲಿ ಸುರೇಶ ಅಂಗಡಿ ರಾಜ್ಯ ಸಚಿವರಾಗಿದ್ದಾಗ ಒಂದು ಸಲ ರೈಲ್ವೆ ಇಲಾಖೆಯವರು ಆಗಮಿಸಿ ಸ್ಥಳ ಪರಿಶೀಲಿಸಲು ಸೂಚಿಸಿದ್ದರು.ಅದರಂತೆ ಅಧಿಕಾರಿಗಳು ಬಂದು ಪರಿಶೀಲನೆ ಸಹ ಮಾಡಿದ್ದರು. ಆದರೆ, ಅಂಗಡಿ ಅವರ ನಿಧನದಿಂದಾಗಿ ಆ ಪ್ರಕ್ರಿಯೆ ಮುಂದುವರಿಯಲೇ ಇಲ್ಲ. ಈಗ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರಿಗೂ ಗ್ರಾಮಸ್ಥರು ಪದೇ ಪದೆ ಮನವಿ ಮಾಡಿಕೊಳ್ಳುತ್ತಲೇ ಇದ್ದಾರೆ. ಆದರೂ ಯಾವುದೇ ಭರವಸೆ ಲಭಿಸಿಲ್ಲ.
ಮಂಡಿಹಾಳ ಗ್ರಾಮದ ಕೆಲ ಯುವಕರು ಈಗ ಸಾಮಾಜಿಕ ಜಾಲತಾಣದ ಮೂಲಕ ಹೋರಾಟ ಆರಂಭಿಸಿದ್ದಾರೆ. ಮುಖ್ಯವಾಗಿ ಟ್ವಿಟರ್‌ನಲ್ಲಿ ಈ ಬಗ್ಗೆ ನಿರಂತವಾಗಿ ಪೋಸ್ಟ್‌ಗಳನ್ನು ಹಾಕುತ್ತ ಸಂಬಂಧಿಸಿದವರಿಗೆ ಟ್ಯಾಗ್ ಮಾಡಿ, ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಮಂಡಿಹಾಳ ಗ್ರಾಮದಿಂದ 2 ಕಿಮೀ ದೂರ ಸೇತುವೆ ಮಾಡಿದ್ದಾರೆ. ಅದು ಯಾವುದಕ್ಕೂ ಉಪಯೋಗ ಇಲ್ಲ. ಬೇಗ ನಮ್ಮೂರಿಗೆ ಮೊದಲು ಇದ್ದಂತೆಯೇ ಸಂಪರ್ಕ ಕಲ್ಪಿಸಿಕೊಡಲಿ.I ಮಹಾಂತೇಶ ಬಡಿಗೇರ, ಟ್ವಿಟರ್ ಹೋರಾಟ ನಡೆಸಿದವರು ಸೇತುವೆ ಸಂಪರ್ಕ ರಸ್ತೆ ಮಧ್ಯೆ ಖಾಸಗಿ ಜಾಗವಿದೆ. ಆ ಮಾಲೀಕರ ಜತೆಗೆ ಮಾತನಾಡುತ್ತೇವೆ. ಜನರಿಗೆ ಸೂಕ್ತ ಸ್ಥಳದಲ್ಲಿ ಸೇತುವೆ ಮಾಡುತ್ತೇವೆ. I ಸಂತೋಷ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ