ನೆಲಮಂಗಲ ತಾಲೂಕು ಸೋಂಪುರ ಹೋಬಳಿಯಲ್ಲಿ ಪಾಲಕರೊಂದಿಗೆ ರೈಲ್ವೆ ಹಳಿ ದಾಟುತ್ತಿರುವ ಶಾಲಾ ಮಕ್ಕಳು. 
ಜಿಲ್ಲೆ

ಪ್ರಾಣ ಪಣಕ್ಕಿಟ್ಟು ರೈಲು ಹಳಿ ದಾಟುವ ಸ್ಥಿತಿ!

ಬರಗೇನಹಳ್ಳಿ ಚಿಕ್ಕರಾಜ ದಾಬಸ್​ಪೇಟೆ

ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯಲ್ಲಿ ರೈಲ್ವೆ ಇಲಾಖೆಯ ಭೂಸ್ವಾಧಿನ ಪ್ರಕ್ರಿಯೆ ಮೂರು ಗ್ರಾಮಗಳ ಜನರ ಜೀವನಕ್ಕೆ ಕುತ್ತು ತಂದಿದೆ. ಸಾರ್ವಜನಿಕ ರಸ್ತೆ ಸ್ವಾಧಿನದಿಂದಾಗಿ ಮೂರು ಗ್ರಾಮಗಳ ಜನರು ನಿತ್ಯ ರೈಲ್ವೆ ಹಳಿ ದಾಟುವುದು ಅನಿವಾರ್ಯವಾಗಿದ್ದು, ಪ್ರಾಣ ಪಣಕ್ಕಿಡುವಂತಾಗಿದೆ. ಶಾಲೆಗಳಿಗೆ ಹೋಗುವ ಪುಟ್ಟಮಕ್ಕಳು ಸೇರಿ ಹಿರಿಯ ನಾಗರಿಕರು ಪ್ರತಿ ದಿನ ಪ್ರಾಣಭೀತಿ ಎದುರಿಸುವಂತಾಗಿದೆ.

ರೈಲ್ವೆ ಹಳಿ ಪಕ್ಕದ ರಸ್ತೆ ಸ್ವಾಧಿನ: ಸೋಂಪುರ ಹೋಬಳಿಯ ನಿಡುವಂದ ದಾಖಲೆಯ ಅಲ್ಪಯ್ಯನ ಪಾಳ್ಯ, ಹೊಸಳ್ಳಿಯನತೋಟ ಮತ್ತು ರಾಜನಪಾಳ್ಯದ ಜನರು ಗ್ರಾಮಗಳಿಂದ ಬೇರೆ ಕಡೆ ಹೋಗಬೇಕಾದರೆ ಅನ್ಯ ಮಾರ್ಗವಿಲ್ಲ. ಈ ಹಿಂದೆ ರೈಲ್ವೆ ಹಳಿ ಪಕ್ಕದಲ್ಲಿದ್ದ ರಸ್ತೆಯನ್ನು ರೈಲ್ವೆ ಇಲಾಖೆ ಸ್ವಾಧಿನ ಮಾಡಿಕೊಂಡಿರುವುದರಿಂದ ಓಡಾಟಕ್ಕೆ ಪರ್ಯಾಯ ಮಾರ್ಗವಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ರೈಲ್ವೆ ಹಳಿಗಳನ್ನೇ ದಾಟಬೇಕಾದ ಅನಿವಾರ್ಯತೆ ಎದುರಾಗಿದೆ.

ಪ್ರಾಣಕ್ಕೆ ಕುತ್ತು: ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಪ್ರಾಥಮಿಕ ಶಾಲೆಗಳ ಮಕ್ಕಳು ನಿತ್ಯ ಶಾಲೆಗಳಿಗೆ ಹೋಗಿಬರುವರು. ಕೆಲ ಮಕ್ಕಳು ಪಾಲಕರ ಜತೆಗೆ ಬಂದರೆ ಹಲವರು ಸಹಪಾಠಿಗಳೊಂದಿಗೆ ಓಡಾಡುತ್ತಾರೆ. ಯಾವಾಗ ರೈಲು ಈ ಕಡೆ ಸಂಚರಿಸುತ್ತದೆ ಎಂಬುದರ ಅರಿವಿರುವುದಿಲ್ಲ. ಎಷ್ಟೋ ಸಂದರ್ಭದಲ್ಲಿ ಹಳಿ ದಾಟುವಾಗ ರೈಲು ಹತ್ತಿರಕ್ಕೆ ಬಂದಂತಾಗಿ ಕಿರುಚಾಡಿಕೊಂಡು ಮಕ್ಕಳು ಓಡುವ ಪ್ರಸಂಗಗಳು ನಡೆಯುತ್ತಿವೆ. ಮಕ್ಕಳ ಪ್ರಾಣಕ್ಕೆ ಸಂಚಕಾರ ತಂದೊಡ್ಡಿರುವುದು ಪಾಲಕರಲ್ಲಿ ಆತಂಕ ಮೂಡಿಸಿದೆ.

ಅಂಡರ್​ಪಾಸ್​ ಯಾವಾಗ? : ಸೋಂಪುರ ಹೋಬಳಿಯ ಈ ಮೂರು ಗ್ರಾಮಗಳಲ್ಲಿ ಸುಮಾರು 140 ಕುಟುಂಬಗಳಿದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಾರೆ. ಆದರೆ, ಈ ಮೂರು ಗ್ರಾಮಗಳಿಗೆ ಸಂಪರ್ಕ ರಸ್ತೆ ಇಲ್ಲದಂತಾಗಿದೆ. ಶಾಲಾ ವಾಹನ, ಡೇರಿಗೆ ಹಾಲು ಹಾಕಲು ರೈಲು ಹಳಿ ದಾಟಬೇಕು. ರೈಲ್ವೆ ಅಧಿಕಾರಿಗಳನ್ನು ಕೇಳಿದರೆ ಸ್ವಲ್ಪ ದಿನ ತಡೆಯಿರಿ, ಮುಂದೆ ಅಂಡರ್​ಪಾಸ್​ ಮಾಡುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ, ಭರವಸೆ ಈಡೇರುವುದು ಯಾವಾಗ, ಜನರ ಪ್ರಾಣಬಲಿ ಬೇಕಾಗಿದೆಯೇ ಎಂದು ಗ್ರಾಮಸ್ಥರು ಅಲವತ್ತುಗೊಂಡಿದ್ದಾರೆ. ಹಳಿ ದಾಟುವ ವೇಳೆ ಈಗಾಲೇ ಚನ್ನಬೈರಪ್ಪ, ಪುಟ್ಟ ಲ್ಮಮ್ಮ ಹಾಗೂ ಸೌರವ್​ ಎಂಬುವರು ಮೃತಪಟ್ಟಿರುವುದು, ಸಮಸ್ಯೆ ನೀಗಲು ಇನ್ನೇಷ್ಟು ಬಲಿ ಬೇಕು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.

ನಮ್ಮ ಗ್ರಾಮದಿಂದ 50ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗಿಬರುತ್ತಾರೆ. ಎಲ್ಲರೂ ರೈಲ್ವೆ ಹಳಿ ದಾಟಿ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಬೆಳಗ್ಗೆ ಹಾಗೂ ಸಂಜೆ ಮಕ್ಕಳನ್ನು ಶಾಲೆಗೆ ಕಳುಹಿಸಿ ಕರೆದುಕೊಂಡು ಬರುವಷ್ಟರಲ್ಲಿ ಪ್ರಾಣ ಕೈಗೆ ಬಂದಂತಾಗುತ್ತದೆ. ಈ ಬಗ್ಗೆ ರೈಲ್ವೆ ಇಲಾಖೆಯಾಗಲಿ, ಸ್ಥಳಿಯ ಜನಪ್ರತಿನಿಧಿಗಳಾಗಲಿ ಗಮನ ಹರಿಸಿ ಈ ಭಾಗದಲ್ಲಿ ಅಂಡರ್​ಪಾಸ್​ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕು. > ಲಕ್ಷ್ಮೀದೇವಿ ಅಲ್ಪಯ್ಯನಪಾಳ್ಯ ನಿವಾಸಿ ಸುಮಾರು ವರ್ಷದಿಂದ ನಾವುಗಳು ರೈಲ್ವೆ ಹಳಿಪಕ್ಕ ರಸ್ತೆಯಲ್ಲಿ ಓಡಾಡುತ್ತಿದ್ದೆವು. ಆದರೆ, ರೈಲ್ವೆ ಅಧಿಕಾರಿಗಳು ರಸ್ತೆ ಸ್ವಾಧಿನ ಮಾಡಿಕೊಂಡಿರುವುದರಿಂದ ಆ ರಸ್ತೆ ಬಳಸುವಂತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದೆವಾದರೂ ಕ್ರಮಕ್ಕೆ ಮುಂದಾಗಿಲ್ಲ. > ಜಿ.ವೆಂಕಟೇಶ್​ ರಾಜನಪಾಳ್ಯ ನಿವಾಸಿ