ಹುಬ್ಬಳ್ಳಿ: ಧಾರವಾಡ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಸಹಯೋಗದಲ್ಲಿ 58ನೇ ಕರ್ನಾಟಕ ರಾಜ್ಯ ಕ್ರಾಸ್ ಕಂಟ್ರಿ ಓಟದ ಸ್ಪರ್ಧೆಯನ್ನು ಜ. 7ರಂದು ಬೆಳಗ್ಗೆ 6ಕ್ಕೆ ನಗರದ ತೋಳನಕೆರೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಏರ್ಪಡಿಸಲಾಗಿದೆ ಎಂದು ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ವಿಲಾಸ ನೀಲಗುಂದ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಜಿಲ್ಲೆಯಿಂದ 45 ಜನರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದಿಂದ ಒಟ್ಟು 36 ಜನರನ್ನು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದರು.
ಬೆಂಗಳೂರಿನ ರಾಷ್ಟ್ರೀಯ ಆಟಗಾರ ಶಿವಾಜಿ ಸೇರಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಅಥ್ಲೀಟ್ಗಳು ಸ್ಪರ್ಧೆಯಲ್ಲಿ ಭಾಗವಹಿಸುವರು. 10 ಕಿ.ಮೀ., 8 ಕಿ.ಮೀ., 6 ಕಿ.ಮೀ. ಹೀಗೆ ವಿವಿಧ ಗುಂಪಿನಲ್ಲಿ ಪುರುಷ, ಮಹಿಳೆಯರು, ಬಾಲಕ, ಬಾಲಕಿಯರಿಗಾಗಿ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಒಟ್ಟು 1 ಲಕ್ಷ ರೂ. ಮೌಲ್ಯದ ಬಹುಮಾನ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ 3 ಕಿ.ಮೀ. ಮೋಜಿನ ರನ್ ಏರ್ಪಡಿಸಲಾಗಿದ್ದು, ಇದರಲ್ಲಿ ಎಲ್ಲ ಆಸಕ್ತರು ಪಾಲ್ಗೊಳ್ಳಬಹುದಾಗಿದೆ. ಕ್ರೀಡಾ ಸಾಧಕರಾದ ಅಶ್ವಿನಿ ಅಕ್ಕುಂಜಿ, ಬಿಂಧುರಾಣಿ, ಎ. ರಾಜವೇಲು, ಅಶ್ವಥ ಏಣಗಿ ಅವರನ್ನು ಸನ್ಮಾನಿಸಲಾಗುತ್ತಿದೆ.
ಈ ಸ್ಪರ್ಧೆಗೆ ಗಣ್ಯರಾದ ವೀರೇಶ ಉಂಡಿ, ಡಾ. ವಿ.ಎಸ್.ವಿ. ಪ್ರಸಾದ ಸೇರಿ ಅನೇಕರು ಸಹಕಾರ ನೀಡಿದ್ದಾರೆ. ಜ. 7ರಂದು ಬೆಳಗ್ಗೆ 6ಕ್ಕೆ ಹೊಸೂರ ಉಣಕಲ್ಲ ರಸ್ತೆಯಲ್ಲಿರುವ ಹೊಸ ಕೋರ್ಟ್ ಬಳಿಯ ಚೈತನ್ಯ ಸ್ಪೋರ್ಟ್ಸ್ ಫೌಂಡೇಷನ್ ಹತ್ತಿರ ಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ ಎಂದರು.
ಸಂಘಟನೆಯ ಅಧ್ಯಕ್ಷ ಕಿರಣ ಮುನವಳ್ಳಿ, ಖಜಾಂಚಿ ಪಿ. ಮಂಜುನಾಥ, ಉಮೇಶ ಭಟ್ಟ, ಎಸ್.ಜಿ. ಹರೀಶ, ಮಹಾಂತೇಶ ಬಳ್ಳಾರಿ, ಬಸವರಾಜ ಇತರರು ಗೋಷ್ಠಿಯಲ್ಲಿದ್ದರು.