ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿರುವ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೋಟ್ಯಂತರ ರೂ. ಮೌಲ್ಯದ ಚರಾಸ್ತಿ ಹೊಂದಿದ್ದರೂ, ಅವರಿಗೆ ವಾಸಕ್ಕೆ ಜಾಗವೂ ಇಲ್ಲ, ಸ್ವಂತ ಮನೆಯೂ ಇಲ್ಲ…!
ಈ ಬಗ್ಗೆ ಯದುವೀರ್ ಒಡೆಯರ್ ಅವರು ನಾಮಪತ್ರ ಸಲ್ಲಿಕೆಯ ಆಸ್ತಿ ವಿವರದಲ್ಲಿ ದೃಢಪಡಿಸಿದ್ದಾರೆ. ಯಾವುದೇ ರೀತಿಯ ಆದಾಯ ತೆರಿಗೆ ಹಣ ಬಾಕಿ ಉಳಿಸಿಕೊಂಡಿಲ್ಲ. ತಮ್ಮ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ ಎಂದು ಘೋಷಿಸಿದ್ದಾರೆ. ಅವರು ಒಟ್ಟು 4, 99, 59,303 ರೂ. ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಆದರೆ, ತಮ್ಮ ಬಳಿಯಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.
ತಮ್ಮ ಕೈಯಲ್ಲಿ ಒಂದು ಲಕ್ಷ ರೂ. ನಗದು, ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಲ್ಲಿ 14,55,000 ರೂ. ಹಾಗೂ ಐಡಿಎಫ್‌ಸಿ ಬ್ಯಾಂಕ್ ಖಾತೆಯಲ್ಲಿ 9,00,000 ರೂ. ಇದೆ. ವಿವಿಧ ಬ್ಯಾಂಕ್ ಮತ್ತು ಕಂಪನಿಗಳಲ್ಲಿ 1,36,04,303 ರೂ. ಮೌಲ್ಯದ ಬಾಂಡ್ ಮತ್ತು ಷೇರು ಇರುವುದಾಗಿಯೂ ಘೋಷಣೆ ಮಾಡಿದ್ದಾರೆ. ಜತೆಗೆ 4 ಕೆಜಿ ಚಿನ್ನ, 20 ಕೆಜಿ ಬೆಳ್ಳಿ ಇದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಯದುವೀರ್ ಬಳಿ ಯಾವುದೇ ಕೃಷಿ ಭೂಮಿ, ಸ್ವಂತ ಮನೆ ಇಲ್ಲ. ಯಾವುದೇ ವಾಣಿಜ್ಯ ಕಟ್ಟಡಗಳಿಲ್ಲ. ಬ್ಯಾಂಕ್‌ಗಳಲ್ಲಿ ಸಾಲ ಪಡೆದಿಲ್ಲ ಎಂದೂ ಘೋಷಣೆ ಮಾಡಿದ್ದಾರೆ.