ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ತ್ರಾಸಿ ಕಡಲ ತೀರ ಇನ್ನಷ್ಟು ಸುಂದರವಾಗಿಸಿ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ 9.95 ಕೋಟಿ ರೂ. ವೆಚ್ಚದ ಕಡಲ ತೀರದ ಅಭಿವೃದ್ಧಿಗೆ ಚಾಲನೆ ನೀಡಿ ವರ್ಷ ಕಳೆದರೂ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ.
ತ್ರಾಸಿ-ಮರವಂತೆ ಕಡಲತೀರದ ಸಮೀಪದಲ್ಲೇ ಕುಂದಾಪುರ-ಗೋವಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗುತ್ತಿದ್ದು, ಅದಾಗಿಯೂ ಇಲ್ಲಿ ಪ್ರವಾಸಿಗರನ್ನು ಸೆಳೆಯುವಂತಹ ಯಾವುದೇ ಮಹತ್ವದ ಅಭಿವೃದ್ಧಿ ಕಾರ್ಯ 10-15 ವರ್ಷದಿಂದ ನಡೆದಿಲ್ಲ. ಕೇವಲ ಘೋಷಣೆಗಳಿಗಷ್ಟೇ ತ್ರಾಸಿ ಕಡಲ ತೀರದ ಅಭಿವೃದ್ಧಿ ಸೀಮಿತವಾಗಿತ್ತು.
ತ್ರಾಸಿ ಬೀಚ್ ಅಭಿವೃದ್ಧಿ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆ ಸುಮಾರು 9.95 ಕೋಟಿ ರೂ.ವೆಚ್ಚದ ಯೋಜನೆ ಸಿದ್ಧಪಡಿಸಿದ್ದು, ಸೀವಾಕ್, ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಫುಡ್ ಕೋರ್ಟ್, ಸೈಕಲ್ ಟ್ರಾೃಕ್, ಮಕ್ಕಳ ಪಾರ್ಕ್ ಸಹಿತ ವಿವಿಧ ಅಭಿವೃದ್ಧಿ ಕಾರ‌್ಯ ಅನುಷ್ಠಾನಗೊಳ್ಳಬೇಕಿದೆ.
ತ್ರಾಸಿ-ಮರವಂತೆಗೆ ಬರುವಂತಹ ಪ್ರವಾಸಿಗರಿಗೆ ವಾಹನ ನಿಲುಗಡೆಗೆ ಸಮಸ್ಯೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿತ್ತು. ಇದರಿಂದ ಅಪಘಾತ ಹೆಚ್ಚಾಗುತ್ತಿದ್ದರಿಂದ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ರಾ.ಹೆ. ಎರಡೂ ಕಡೆಗಳಲ್ಲಿ ತಲಾ 100 ವಾಹನ ನಿಲ್ಲಿಸುವಂತಹ ಸುವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಕಡಲ ತೀರದುದ್ದಕ್ಕೂ ಫುಟ್‌ಪಾತ್, 650 ಮೀ. ಸೈಕಲ್ ಟ್ರಾೃಕ್, ಫುಡ್ ಕೋರ್ಟ್, ವಿಹಾರಿಗಳಿಗೆ ಕುಳಿತುಕೊಳ್ಳುವಂತಹ ವ್ಯವಸ್ಥೆ, ತ್ರಾಸಿ ಬೀಚ್ ಬಳಿ ಬಯಲು ರಂಗಮಂಟಪ, ಮಕ್ಕಳಿಗೆ ಆಟವಾಡಲು ಪಾರ್ಕ್, ಎರಡೂ ಕಡೆ ಪ್ರವೇಶ- ನಿರ್ಗಮನ ದ್ವಾರ, ಕಡಲಾಮೆ ಶಿಲ್ಪಾಕೃತಿ, ಶೌಚಗೃಹ ಸಹಿತ ಇನ್ನಿತರ ಹಲವು ವ್ಯವಸ್ಥೆ ಅಭಿವೃದ್ಧಿ ಕಾಮಗಾರಿಯಲ್ಲಿ ಒಳಗೊಂಡಿದೆ. ಕರ್ನಾಟಕ ಟೂರಿಸಂ ಡೆವಲಪ್‌ಮೆಂಟ್ ಲಿಮಿಟೆಡ್(ಕೆಟಿಎಲ್) ಕಾಮಗಾರಿ ನಿರ್ವಹಿಸಲಿದೆ.
ಕಾಮಗಾರಿ ಮಾತ್ರ ಮಂದಗತಿಯಲ್ಲಿ ಸಾಗುತ್ತಿದ್ದು, ಸ್ಥಳೀಯರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪಾರ್ಕ್ ಒಳಗೆ ಇರುವ ಗೂಡಂಗಡಿ ಮೂರು ಕಡೆ ಸ್ಥಳಾಂತರ ಮಾಡಿರುವುದು, ಇದ್ದ ಇಂಟರ್‌ಲಾಕ್ ಕಿತ್ತು ಮರು ಜೋಡಣೆ ಮಾಡಿರುವುದು, ಶೌಚಗೃಹ ದುರಸ್ತಿ, ಕಲಾಕೃತಿಗಳ ರಚನೆ ವಿವಾದ, ಫುಡ್‌ಕೋರ್ಟ್ ಮೇಲ್ಛಾವಣಿಗೆ ಶೀಟ್ ಅಳವಡಿಸಿರುವುದು, ಚಿಕ್ಕದಾದ ಬಯಲುರಂಗ ಮಂಟಪ ರಚನೆ ಮೊದಲಾದ ಕಾಮಗಾರಿ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ಅನುದಾನ ದುರುಪಯೋಗದ ಆರೋಪ ಕೇಳಿಬಂದಿದೆ. 2020-21ನೇ ಸಾಲಿನಲ್ಲಿ ಮಂಜೂರಾದ ಕೋಟಿ ಕೋಟಿ ಅನುದಾನ ಕಡತಕ್ಕೆ ಸೀಮಿತವಾದಂತಿದ್ದು, ಅಭಿವೃದ್ಧಿ ಎಂಬುದು ಗಗನ ಕುಸುಮದಂತಿದೆ ಎಂದು ಸ್ಥಳೀಯರು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತ್ರಾಸಿ ಬೀಚ್‌ನಲ್ಲಿ ಸುಮಾರು 9.95 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳಿಸುವ ಸಂದರ್ಭ ಸ್ಥಳೀಯಾಡಳಿತ ಹಾಗೂ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ತಮ್ಮ ಮನಸ್ಸಿಗೆ ಬಂದ ಹಾಗೆ ಕಾಮಗಾರಿ ಮಾಡುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರವಾಸೋದ್ಯಮ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿ ಮುಂದುವರಿಸಬೇಕೆಂದು ಇಲಾಖೆ ಇಂಜಿನಿಯರ್‌ಗೆ ಸೂಚನೆ ನೀಡಲಾಗಿದೆ. -ಮಿಥುನ್ ಬಿಜೂರು ತ್ರಾಸಿ ಗ್ರಾಪಂ ಅಧ್ಯಕ್ಷ ತ್ರಾಸಿ ಬೀಚ್‌ನಲ್ಲಿ ಕೋಟಿ ಕೋಟಿ ರೂ. ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಕೇವಲ ಪತ್ರಿಕೆಗಳಲ್ಲಿ ಮಾತ್ರ ಬರುತ್ತಿದೆ ಬಿಟ್ಟರೆ ಇಲ್ಲಿ ಯಾವ ಕೆಲಸವೂ ಆಗುತ್ತಿಲ್ಲ. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸ್ಥಳೀಯಾಡಳಿತ ಮತ್ತು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯೋಜನೆ ರೂಪಿಸಿ ಕಾಮಗಾರಿ ನಡೆಸುತ್ತಿದೆ. ಯಾವುದೇ ಅಭಿವೃದ್ಧಿ ಕಾಮಗಾರಿ ಪ್ರಾರಂಭಕ್ಕೂ ಮುನ್ನ ಸ್ಥಳೀಯಾಡಳಿತದ ಗಮನಕ್ಕೆ ತಂದು ಸ್ಥಳೀಯರ ಅಭಿಪ್ರಾಯಪಡೆದುಕೊಂಡೇ ಕಾಮಗಾರಿ ನಿರ್ವಹಿಸಬೇಕು. ತ್ರಾಸಿ ಬೀಚ್ ಅಭಿವೃದ್ಧಿ ಬಗ್ಗೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಸ್ಥಳೀಯಾಡಳಿತ, ಸ್ಥಳೀಯರ ಸಭೆ ಕರೆದು ಚರ್ಚೆ ನಡೆಸಬೇಕು. -ರವೀಂದ್ರ ಖಾರ್ವಿ ಸ್ಥಳೀಯರು, ಹೊಸಪೇಟೆ ತ್ರಾಸಿ https://www.vijayavani.net/old-students-association-inaugurated-at-uppala-school https://www.vijayavani.net/kambala-is-one-of-the-wonderful-art-forms