ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ನಕೀಬ್ ನಜೀಬ್ ಮುಲ್ಲಾನನ್ನು ಕರೆತರುತ್ತಿರುವ ಪೊಲೀಸ್ ಅಧಿಕಾರಿಗಳು. 
ಜಿಲ್ಲೆ

ಕೋಟಿಗಟ್ಟಲೆ ಜಿಎಸ್‌ಟಿ ನುಂಗಿದ ನಕೀಬ್!

ಶಂಕರ ಗೆಜ್ಜಿ

ಬೆಳಗಾವಿ: ನಕಲಿ ಇನ್‌ವಾಯ್ಸ (ಬಿಲ್) ಸೃಷ್ಟಿಸಿ ದೊಡ್ಡ ಮೊತ್ತದ ಕ್ರೆಡಿಟ್ ಹಣ ಕಬಳಿಸಿದ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಂಡಿದ್ದು, ಪ್ರಾಮಾಣಿಕವಾಗಿ ತೆರಿಗೆ ಹಣ ಕಟ್ಟಿದವರಿಗೂ ಬಿಸಿ ತಟ್ಟಿದೆ. ಮತ್ತೊಂದೆಡೆ ಆಟೋ, ದ್ವಿಚಕ್ರ ವಾಹನ ನಂಬರ್ ಬಳಸಿ ಅಕ್ರಮ ಎಸಗಿರುವುದೂ ಬೆಳಕಿಗೆ ಬಂದಿದೆ.

ಬೆಳಗಾವಿ ಕೇಂದ್ರಿತವಾಗಿ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆ ಪ್ರಕರಣದಲ್ಲಿ ಜು.10 ರಂದು ಬಂಧಿತ ಬೆಳಗಾವಿಯ ನಕೀಬ್ ನಜೀಬ್ ಮುಲ್ಲಾ ಎಂಬ ಆರೋಪಿಯು ದೊಡ್ಡ, ಸಣ್ಣ ಗಾತ್ರದ ಉದ್ಯಮಿದಾರರ ಜತೆ ವ್ಯವಹಾರ ನಡೆಸಿದ್ದಾರೆ. ಮೇಲ್ನೋಟಕ್ಕೆ ಪ್ರಕರಣದ ಆರೋಪಿ ಒಬ್ಬನೇ ಇದ್ದರೂ ಆತ ಹಲವು ಪ್ರಭಾವಿಗಳ ಹೆಸರು, ಜಿಎಸ್‌ಟಿ ಸಂಖ್ಯೆಗಳನ್ನು ಅಕ್ರಮಕ್ಕೆ ಬಳಸಿದ್ದಾನೆ. ಅಲ್ಲದೆ, ಫೆಡರಲ್ ಲಾಜಿಸ್ಟಿಕ್ಸ್ ಎಂಬ ನಕಲಿ ಕಂಪನಿ ಹೆಸರಿನಲ್ಲಿ ಮೂರು ತಿಂಗಳ ಅವಧಿಯಲ್ಲಿ ಈ ಸಂಸ್ಥೆ ಮೂಲಕ ನೂರಾರು ಕೋಟಿ ರೂ.ವ್ಯವಹಾರ ನಡೆಸಿದ ಬಗ್ಗೆ ದಾಖಲೆ ಸೃಷ್ಟಿಸಿರುವುದು ಪ್ರಾಥಮಿಕ ತನಿಖೆಯ ವೇಳೆ ಗೊತ್ತಾಗಿದೆ ಎನ್ನಲಾಗಿದೆ.

ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಬೆಳಗಾವಿ ವಲಯ ವ್ಯಾಪ್ತಿಯ 12 ಜಿಲ್ಲೆಗಳ ಸಾಕಷ್ಟು ಜನರು ಆರೋಪಿ ಮೂಲಕ ಜಿಎಸ್‌ಟಿ ಕಟ್ಟಿದ್ದಾರೆ. ಅವರಲ್ಲಿ ಹಲವರು ಪ್ರಾಮಾಣಿಕವಾಗಿ ಹಣ ಕೊಟ್ಟಿದ್ದಾರೆ. ಆದರೆ, ಅದನ್ನು ಇಲಾಖೆಗೆ ತಲುಪಿಸದೆ ಜಿಎಸ್‌ಟಿ ತಲುಪಿದೆ ಎಂಬ ಸುಳ್ಳು ದಾಖಲೆ ಸೃಷ್ಟಿಸಿ ಅವರಿಗೂ ವಂಚಿಸಿದ್ದಾನೆ. ಅಲ್ಲದೆ, ನಕಲಿ ಇನ್‌ವಾಯ್ಸ ಮೂಲಕ 132 ಕೋಟಿ ರೂ. ನಕಲಿ ವ್ಯವಹಾರದ ದಾಖಲೆ ಸೃಷ್ಟಿಸಿ 23.82 ಕೋಟಿ ರೂ. ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಸರ್ಕಾರದಿಂದ ಪಡೆದಿದ್ದು ತಿಳಿದುಬಂದಿದೆ. ಪರಿಣಾಮ ಈ ವ್ಯಕ್ತಿಯ ಮೂಲಕ ತೆರಿಗೆ ಸಂದಾಯ ಮಾಡಿದ ಎಲ್ಲರಿಗೂ ಸಂಕಷ್ಟ ತಲೆದೋರಿದೆ.

ನಕಲಿ ಇನ್‌ವಾಯ್ಸ (ಬಿಲ್) ಸೃಷ್ಟಿಸಿ ಇಷ್ಟು ದೊಡ್ಡ ಮೊತ್ತದ ಕ್ರೆಡಿಟ್ ಹಣ ಕಬಳಿಸಿದ್ದು ಇದೇ ಮೊದಲು. ಉದ್ಯಮಿಗಳು ಪ್ರಾಮಾಣಿಕವಾಗಿ ಜಿಎಸ್‌ಟಿ ಹಣ ಸಂದಾಯ ಮಾಡಿದ್ದರೂ ಇಲಾಖೆಗೆ ತಲುಪಿಲ್ಲ. ಈಗ ಇಲಾಖೆಯವರು ಸಂಬಂಧಪಟ್ಟ ಉದ್ಯಮಿಗಳಿಂದ ವಸೂಲಿ ಮಾಡಬೇಕು. ಎಷ್ಟು ವರ್ಷಗಳಿಂದ ಹಣ ಸಂದಾಯವಾಗಿಲ್ಲ ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಜಿಎಸ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ಇನ್‌ವಾಯ್ಸ (ಬಿಲ್) ಸೃಷ್ಟಿಸಿ ದೊಡ್ಡ ಮೊತ್ತದ ಕ್ರೆಡಿಟ್ ಹಣ ಕಬಳಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಎಲ್ಲ ಆಯಾಮಗಳ ಮೂಲಕ ತನಿಖೆ ಕೈಗೊಳ್ಳಲಾಗಿದೆ. ನಕೀಬ್ ನಜೀಬ್ ಮುಲ್ಲಾನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಧಿಕಾರಿಗಳ ತನಿಖೆ ಪ್ರಗತಿ ಹಂತದಲ್ಲಿದ್ದು, ವರದಿ ಕೈಸೇರಿದ ಬಳಿಕ ಅಕ್ರಮದ ಸ್ಪಷ್ಟ ಮಾಹಿತಿ ಗೊತ್ತಾಗಲಿದೆ.| ದಿನೇಶ ಪಂಗಾರ್ಕರ್, ಸರಕು ಮತ್ತು ಸೇವಾ ತೆರಿಗೆ, ಕೇಂದ್ರೀಯ ಅಬಕಾರಿ ಆಯುಕ್ತರ ಕಚೇರಿ ಪ್ರಧಾನ ಆಯುಕ್ತ